ನವದೆಹಲಿ, ಡಿ. 18 (DaijiworldNews/TA): ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ ದೇಶದ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಪ್ರತಿವರ್ಷ ನಡೆಯುವ ಈ ಪರೀಕ್ಷೆಯ ಮೂಲಕ ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಸೇರಿದಂತೆ ಹಲವು ಉನ್ನತ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಹ ಯಶಸ್ಸನ್ನು ಪಡೆದವರ ಕಥನವೂ ಪ್ರೇರಣದಾಯಕವಾಗಿರುತ್ತದೆ. ಅಂತಹ ಕಥೆ ಲಕ್ನೋ ಮೂಲದ ಆದಿತ್ಯ ಶ್ರೀವಾಸ್ತವ ಅವರದ್ದು.

ಹೌದು ಈ ಕಠಿಣ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ್ಯಾಂಕ್ (AIR 1) ಪಡೆದು ಗಮನ ಸೆಳೆದವರು ಉತ್ತರ ಪ್ರದೇಶದ ಲಕ್ನೋ ಮೂಲದ ಆದಿತ್ಯ ಶ್ರೀವಾಸ್ತವ. ವಿಶೇಷವೆಂದರೆ, ಅವರು ವರ್ಷಕ್ಕೆ ಸುಮಾರು 40 ಲಕ್ಷ ರೂಪಾಯಿಗಳ ಸಂಬಳದ ಬಹುರಾಷ್ಟ್ರೀಯ ಕಂಪನಿಯ ಕೆಲಸವನ್ನು ತ್ಯಜಿಸಿ ಯುಪಿಎಸ್ಸಿ ಕನಸನ್ನು ಹಿಂಬಾಲಿಸಿದ್ದರು. ಕೆಲಸ ತೊರೆಯುವ ಸಮಯದಲ್ಲಿ ಯಶಸ್ಸಿನ ಯಾವುದೇ ಖಾತರಿ ಇರಲಿಲ್ಲ. ಆದರೂ ತಂದೆಯ ಕನಸು ಮತ್ತು ತನ್ನ ಮೇಲೆ ಇರುವ ದೃಢ ನಂಬಿಕೆ ಆದಿತ್ಯನಿಗೆ ದಾರಿ ತೋರಿಸಿತು. ಇಂದು ಅವರ ಕಥೆ ಲಕ್ಷಾಂತರ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾಗಿದೆ.
ಶೈಕ್ಷಣಿಕವಾಗಿ ಅತ್ಯಂತ ಪ್ರತಿಭಾವಂತನಾಗಿದ್ದ ಆದಿತ್ಯ ಶ್ರೀವಾಸ್ತವ ಲಕ್ನೋದ ಅಲಿಗಂಜ್ನಲ್ಲಿರುವ ಸಿಎಮ್ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, 10ನೇ ತರಗತಿಯಲ್ಲಿ 97.8 ಶೇಕಡಾ ಹಾಗೂ 12ನೇ ತರಗತಿಯಲ್ಲಿ 97.5 ಶೇಕಡಾ ಅಂಕಗಳನ್ನು ಗಳಿಸಿದ್ದರು. ಬಳಿಕ ಎಂಜಿನಿಯರಿಂಗ್ ವೃತ್ತಿ ಆಯ್ಕೆ ಮಾಡಿಕೊಂಡ ಅವರು ಜೆಇಇ ಮೇನ್ಸ್ ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದರು. ಈ ಮೂಲಕ ಐಐಟಿ ಕಾನ್ಪುರಕ್ಕೆ ಪ್ರವೇಶ ಪಡೆದು ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಹಾಗೂ ಎಂ.ಟೆಕ್ ಪದವಿಗಳನ್ನು ಪಡೆದರು.
ಐಐಟಿ ಕಾನ್ಪುರದಲ್ಲಿ ಶಿಕ್ಷಣ ಮುಗಿಸಿದ ನಂತರ, ಆದಿತ್ಯ ಬಹುರಾಷ್ಟ್ರೀಯ ಕಂಪನಿಯಲ್ಲಿ ವರ್ಷಕ್ಕೆ 40 ಲಕ್ಷ ರೂ. ಪ್ಯಾಕೇಜ್ನ ಉದ್ಯೋಗ ಪಡೆದರು. ಅವರು ಸುಮಾರು ಒಂದೂವರೆ ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದರು. ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಅವರು ಅಮೆರಿಕನ್ ಎಕ್ಸ್ಪ್ರೆಸ್ನಲ್ಲಿ ಅನಾಲಿಸ್ಟ್ ಇಂಟರ್ನ್ ಆಗಿ ಹಾಗೂ ಗೋಲ್ಡ್ಮನ್ ಸ್ಯಾಕ್ಸ್ನಲ್ಲಿ ಅನಾಲಿಸ್ಟ್ ಆಗಿ (ಜೂನ್ 2019 ರಿಂದ ಅಕ್ಟೋಬರ್ 2020ರವರೆಗೆ) ಕೆಲಸ ನಿರ್ವಹಿಸಿದ್ದರು.
ಆದರೆ ಆದಿತ್ಯನ ತಂದೆ ಅಜಯ್ ಶ್ರೀವಾಸ್ತವ ಅವರಲ್ಲಿ ಮಗನು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬೇಕೆಂಬ ಆಸೆ ಗಟ್ಟಿಯಾಗಿತ್ತು. ಕೇಂದ್ರ ಲೆಕ್ಕಪರಿಶೋಧನಾ ಕಚೇರಿಯಲ್ಲಿ ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ತಂದೆಯ ಪ್ರೇರಣೆಯಿಂದ ಆದಿತ್ಯ ನಾಗರಿಕ ಸೇವೆಗಳತ್ತ ಮುಖಮಾಡಿದರು. ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪ್ರಿಲಿಮಿನರಿ ಪರೀಕ್ಷೆ 2021ಕ್ಕೆ ತಯಾರಿ ಆರಂಭಿಸುವ ಒಂದು ತಿಂಗಳ ಮುನ್ನವೇ ಅವರು ತಮ್ಮ ಉನ್ನತ ಸಂಬಳದ ಕೆಲಸವನ್ನು ತೊರೆದರು.
2021ರಲ್ಲಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಫಲರಾದರೂ, ಆದಿತ್ಯ ಧೈರ್ಯ ಕಳೆದುಕೊಳ್ಳಲಿಲ್ಲ. ಕುಟುಂಬದ ಬೆಂಬಲದೊಂದಿಗೆ ಮತ್ತೆ ತಯಾರಿಯನ್ನು ಗಟ್ಟಿಗೊಳಿಸಿದ ಅವರು, ಎನ್ಸಿಇಆರ್ಟಿ ಪಠ್ಯಪುಸ್ತಕಗಳು, ಯೂಟ್ಯೂಬ್ ಹಾಗೂ ಆನ್ಲೈನ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿ ಮುಂದಿನ ಪ್ರಯತ್ನಕ್ಕೆ ಸಜ್ಜಾದರು. ಇದರ ಫಲವಾಗಿ 2022ರ ಯುಪಿಎಸ್ಸಿ ಪರೀಕ್ಷೆಯಲ್ಲಿ 236ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.
ಇಲ್ಲಿಯೇ ನಿಲ್ಲದೇ ಇನ್ನೂ ಹೆಚ್ಚಿನ ಗುರಿಯೊಂದಿಗೆ ಮುಂದುವರೆದ ಆದಿತ್ಯ, 2023ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಪ್ರಥಮ ರ್ಯಾಂಕ್ ಸಾಧಿಸಿ ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು. ಅವರಿಗೆ ತಮ್ಮ ತವರು ರಾಜ್ಯವಾದ ಉತ್ತರ ಪ್ರದೇಶಕ್ಕೆ ನಿಯೋಜನೆ ಲಭಿಸಿದೆ. ತನ್ನ ಯಶಸ್ಸಿನ ಹಿಂದಿರುವ ರಹಸ್ಯವೇ ನಿರಂತರ ಪರಿಶ್ರಮ, ಸಮಯವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಮತ್ತು ಸದಾ ಸಕಾರಾತ್ಮಕ ಮನೋಭಾವ ಎಂಬುವುದಾಗಿ ಆದಿತ್ಯ ಹೇಳುತ್ತಾರೆ.