ಕೊಡಗು, ಡಿ. 17 (DaijiworldNews/TA): ಕಾಡು ಹಂದಿ ಸೆರೆಗೆ ಹಾಕಿದ್ದ ಉರುಳು ರಾಷ್ಟ್ರ ಮೃಗದ ಜೀವವನ್ನೇ ಕಿತ್ತುಕೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳು ಅಕ್ರಮವಾಗಿ ಹಾಕಿದ್ದ ಉರುಳಿಗೆ ಸಿಲುಕಿದ ಹುಲಿ ದಾರುಣವಾಗಿ ಸಾವನ್ನಪ್ಪಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶೋಧ ಕಾರ್ಯ ನಡೆಸುತ್ತಿದೆ.

ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದಲ್ಲಿ ಮಂಗಳವಾರ ಎಸ್ಟೇಟ್ ರಸ್ತೆ ಬದಿಯಲ್ಲಿ ಮೃತ ಹುಲಿ ಪತ್ತೆಯಾಗಿದೆ. ಕಾಡಿನಲ್ಲಿ ಜಿಂಕೆ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಮತ್ತೊಂದು ಅರಣ್ಯದತ್ತ ಸಾಗುತ್ತಿದ್ದ ವೇಳೆ, ದುಷ್ಕರ್ಮಿಗಳು ಹಾಕಿದ ಉರುಳಿಗೆ ಸಿಲುಕಿದ ಹುಲಿ ತೀವ್ರ ನೋವಿನಿಂದ ನರಳುತ್ತಾ ಪ್ರಾಣ ಬಿಟ್ಟಿದೆ ಎನ್ನಲಾಗಿದೆ. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹುಲಿ ಎಲ್ಲೋ ಉರುಳಿಗೆ ಸಿಲುಕಿದ್ದು ಅಲ್ಲಿಂದ ಸುಮಾರು ದೂರ ನಡೆದು ಈ ಸ್ಥಳಕ್ಕೆ ಬಂದಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಗರಹೊಳೆಯಿಂದ ‘ಸ್ಟೆಲ್ಲಾ’ ಹೆಸರಿನ ತರಬೇತಿ ಪಡೆದ ಸ್ನಿಫರ್ ನಾಯಿಯನ್ನು ಕರೆಸಿ ಉರುಳು ಹಾಕಿದ ನಿಖರ ಸ್ಥಳ ಪತ್ತೆಹಚ್ಚಲು ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಗೋಪಾಲ್ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. ಆದರೆ ಸಂಜೆಯಾದರೂ ಉರುಳು ಹಾಕಿದ್ದ ಸ್ಥಳ ಪತ್ತೆಯಾಗದ ಕಾರಣ ಶೋಧ ಕಾರ್ಯಕ್ಕೆ ತಾತ್ಕಾಲಿಕ ಹಿನ್ನಡೆ ಉಂಟಾಗಿದೆ. ಉರುಳಿನ ಮೂಲ ಸ್ಥಳ ಪತ್ತೆಯಾದರೆ ಮಾತ್ರ ದುಷ್ಕರ್ಮಿಗಳನ್ನು ಬಂಧಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಹುಲಿ ಇಲ್ಲಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಮೀನುಕೊಲ್ಲಿ ಅರಣ್ಯದಿಂದ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಳರಿಂದ ಎಂಟು ವರ್ಷದ ವಯಸ್ಸಿನ ಗಂಡು ಹುಲಿ ಎನ್ನಲಾಗಿದೆ. ಇದು ಯಾವ ಅರಣ್ಯದ ವ್ಯಾಪ್ತಿಯ ಹುಲಿ ಎಂಬುದು ಸ್ಪಷ್ಟವಾಗಿಲ್ಲ. ಬಹುಶಃ ಮೀನುಕೊಲ್ಲಿ ಅರಣ್ಯದಿಂದ ದುಬಾರೆ ಅರಣ್ಯದತ್ತ ಸಂಚರಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.
ಮರಣೋತ್ತರ ಪರೀಕ್ಷೆಯಲ್ಲಿ ಹುಲಿಯ ಹೊಟ್ಟೆಯಲ್ಲಿ ಜಿಂಕೆಯ ಹಸಿ ಮಾಂಸ ಪತ್ತೆಯಾಗಿದೆ. ಇದರಿಂದಾಗಿ ಸಾವಿನ ಒಂದು ದಿನದ ಮೊದಲು ಅದು ಜಿಂಕೆ ಬೇಟೆಯಾಡಿದ್ದುದನ್ನು ವೈದ್ಯರು ದೃಢಪಡಿಸಿದ್ದಾರೆ. ಚೇರಳ–ಶ್ರೀಮಂಗಲ ಗ್ರಾಮದ ಬೆಟ್ಟ ಪ್ರದೇಶವನ್ನು ಹುಲಿ ಕಾರಿಡಾರ್ ಎಂದು ಸ್ಥಳೀಯರು ಗುರುತಿಸುತ್ತಾರೆ. ಕಳೆದ 10 ದಿನಗಳಿಂದ ಈ ಹುಲಿ ಈ ಭಾಗದಲ್ಲೇ ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದರೂ, ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಲಿಲ್ಲ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಹುಲಿಗಳು ಸಾವನ್ನಪ್ಪುತ್ತಿರುವುದು ಪ್ರಾಣಿ ಪ್ರಿಯರು ಮತ್ತು ಪರಿಸರವಾದಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ರಾಷ್ಟ್ರ ಮೃಗದ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು, ಅಕ್ರಮ ಉರುಳಿ ಮತ್ತು ಬೇಟೆ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.