ನವದೆಹಲಿ, ಡಿ. 17 (DaijiworldNews/TA): ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ಆತಂಕಕಾರಿ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಗುರುವಾರದಿಂದಲೇ ರಾಷ್ಟ್ರ ರಾಜಧಾನಿಯಲ್ಲಿ ಕಠಿಣ ನಿಯಂತ್ರಣ ಕ್ರಮಗಳು ಜಾರಿಯಾಗಲಿವೆ. ದೆಹಲಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಅವರು, ದೆಹಲಿಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಸಿಬ್ಬಂದಿಗೆ ಕಡ್ಡಾಯವಾಗಿ ಮನೆಯಿಂದಲೇ ಕೆಲಸ (ವರ್ಕ್ ಫ್ರಂ ಹೋಂ) ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆದೇಶಿಸಿದ್ದಾರೆ.

ವಾಯು ಗುಣಮಟ್ಟ ನಿರ್ವಹಣಾ ಆಯೋಗ ಮತ್ತು ಪರಿಸರ ಇಲಾಖೆಯ ನಿರ್ದೇಶನಗಳಂತೆ, ಗುರುವಾರದಿಂದ ಯಾವುದೇ ಸರ್ಕಾರಿ ಅಥವಾ ಖಾಸಗಿ ಕಚೇರಿಯಲ್ಲಿ ಶೇ.50 ಕ್ಕಿಂತ ಹೆಚ್ಚು ಸಿಬ್ಬಂದಿ ಹಾಜರಾಗುವಂತಿಲ್ಲ. ಸಾಧ್ಯವಾದರೆ ಎಲ್ಲಾ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡಬೇಕು ಎಂದು ಸಚಿವ ಮಿಶ್ರಾ ತಿಳಿಸಿದ್ದಾರೆ. ಈ ಕ್ರಮಗಳಿಂದ ವಾಹನ ಸಂಚಾರ ಕಡಿಮೆಯಾಗುವ ಮೂಲಕ ವಾಯು ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.
ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳು, ಅಗ್ನಿಶಾಮಕ ಸೇವೆಗಳು, ಸಾರ್ವಜನಿಕ ಸಾರಿಗೆ, ಜೈಲು ಇಲಾಖೆ ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ದೆಹಲಿಯಲ್ಲಿ ವಾಹನಗಳಿಂದ ಹೊರಬರುವ ಹಾನಿಕಾರಕ ಅನಿಲಗಳು ವಾಯು ಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸುತ್ತಿರುವುದರಿಂದ, ಸಂಚಾರದ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸುವ ಅಗತ್ಯವಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದೇ ವೇಳೆ, ದೆಹಲಿಯಲ್ಲಿ 16 ದಿನಗಳ ಕಾಲ GRAP-3 (ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ) ಜಾರಿಯಲ್ಲಿದ್ದ ಕಾರಣ ನಿರ್ಮಾಣ ಕಾರ್ಯಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದರ ಪರಿಣಾಮವಾಗಿ ನಿರುದ್ಯೋಗಕ್ಕೆ ಒಳಗಾದ ಕಟ್ಟಡ ಕಾರ್ಮಿಕರಿಗೆ ಪರಿಹಾರವಾಗಿ, ನೋಂದಾಯಿತ ಮತ್ತು ಪರಿಶೀಲಿತ ನಿರ್ಮಾಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 10,000 ರೂ. ಜಮೆ ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಇನ್ನೊಂದೆಡೆ, ದೆಹಲಿಯ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಅವರು, ಗುರುವಾರದಿಂದ ಪಿಯುಸಿ (Pollution Under Control) ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ದೆಹಲಿಯಲ್ಲಿ ಪ್ರತಿಯೊಬ್ಬ ವಾಹನ ಸವಾರನಿಗೂ ಪಿಯುಸಿ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಈ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.