ಬೆಳಗಾವಿ, ಡಿ. 17 (DaijiworldNews/TA): ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಸಾಗುತ್ತಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದೆ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಬುಧವಾರ ಮಧ್ಯಾಹ್ನದಿಂದ ಸಿಎಂ ಸದನಕ್ಕೆ ಹಾಜರಾಗದೇ ಸರ್ಕ್ಯೂಟ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬುಧವಾರ ಮಧ್ಯಾಹ್ನದ ಬಳಿಕ ವೈದ್ಯರ ಸಲಹೆಯಂತೆ ಸಿಎಂ ಅಧಿವೇಶನದಲ್ಲಿ ಭಾಗವಹಿಸದೇ, ಸರ್ಕ್ಯೂಟ್ ಹೌಸ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಜೆಯವರೆಗೆ ನಿಗದಿಯಾಗಿದ್ದ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ರದ್ದುಗೊಂಡಿದ್ದು, ಮುಖ್ಯಮಂತ್ರಿಗಳು ಸಂಪೂರ್ಣ ವಿಶ್ರಾಂತಿಗೆ ಶರಣಾಗಿದ್ದಾರೆ. ತಮ್ಮ ತಂದೆಯ ಆರೋಗ್ಯ ವಿಚಾರಿಸಲು ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಸರ್ಕ್ಯೂಟ್ ಹೌಸ್ಗೆ ಧಾವಿಸಿದ್ದಾರೆ.
ಸಿಎಂ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಹರಡುತ್ತಲೇ, ವಿವಿಧ ಪಕ್ಷಗಳ ನಾಯಕರು ಅವರಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ವಿಶೇಷವಾಗಿ, ಭಾಜಪಾ ನಾಯಕ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.
ಜಡಿಎಸ್ ಜಿ.ಟಿ. ದೇವೇಗೌಡ ಕೂಡ ಸಿಎಂ ಅವರನ್ನು ಭೇಟಿಯಾಗಿ, ಚಾಮುಂಡೇಶ್ವರಿ ಕ್ಷೇತ್ರದ ಏತ ನೀರಾವರಿ ಯೋಜನೆ ಹಾಗೂ ಗ್ರೇಟರ್ ಮೈಸೂರು ಅಭಿವೃದ್ಧಿ ಕುರಿತಂತೆ ಮನವಿ ಸಲ್ಲಿಸಿದ್ದಾರೆ. "ಸಿಎಂ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾರೆ. ನಾಳೆ ಅವರು ಸದನಕ್ಕೆ ಹಾಜರಾಗಲಿದ್ದಾರೆ." ಎಂದು ಜಿಟಿಡಿ ತಿಳಿಸಿದ್ದಾರೆ,
"ಸಿಎಂ ಆರೋಗ್ಯದ ಬಗ್ಗೆ ಯಾವುದೇ ಆತಂಕಕ್ಕೆ ಅಗತ್ಯವಿಲ್ಲ. ನಾನು ಅವರನ್ನು ಭೇಟಿಯಾಗಿದ್ದೇನೆ, ಅವರು ಚೆನ್ನಾಗಿದ್ದಾರೆ. ನಾಳೆ ಸದನದಲ್ಲಿ ಹಲವು ಪ್ರಮುಖ ವಿಷಯಗಳಿಗೆ ಉತ್ತರ ನೀಡಬೇಕಿದೆ, ಅದಕ್ಕಾಗಿ ಮಾಹಿತಿ ಪರಿಶೀಲಿಸುತ್ತಿದ್ದಾರೆ."ವೈದ್ಯರ ಮೇಲ್ವಿಚಾರಣೆಯಲ್ಲಿ ಇರುವ ಸಿಎಂ ಗುರುವಾರ ಬೆಳಿಗ್ಗೆ ಸದನಕ್ಕೆ ಹಾಜರಾಗಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸುವ ನಿರೀಕ್ಷೆ ಇದೆ.