ಬೆಳಗಾವಿ, ಡಿ. 17 (DaijiworldNews/AK): ಮುಖ್ಯಮಂತ್ರಿಗಳನ್ನು ಇಳಿಸುವುದು, ಏರಿಸುವ ಜಗಳದ ನಡುವೆ ಸದನ ಯಾಕೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಇಲ್ಲಿ ಮಾತನಾಡಿದ ಅವರು, ಇಡೀ ಸರಕಾರ ಒಟ್ಟಾಗಿ ಬಂದು ಸದನ ನಡೆಸಬೇಕಿತ್ತು. ಸದನದಲ್ಲಿ ಮಂತ್ರಿಗಳು ಒಟ್ಟಾಗಿಲ್ಲ; ಒಡೆದು ಹೋಗಿದ್ದಾರೆ. ಎರಡು ಗ್ಯಾಂಗ್ ಆಗಿವೆ. ಇದೇನು ಸದನವೇ ಎಂದು ಕೇಳಿದರು.
ಬಡವರಿಗೆ, ರೈತರಿಗೆ ಒಳಿತಾಗುವ ನಿರ್ಧಾರ ಮಾಡುತ್ತಾರೆ ಎಂದು ರಾಜ್ಯದ ಏಳು ಕೋಟಿ ಜನರು ಕಾಯುತ್ತಾರೆ. ಗೃಹಲಕ್ಷ್ಮಿ ಹಣ ಬರುತ್ತದೆ; ಪಡಿತರ ಪಡೆಯೋಣ ಎಂದು ಬಡವರು ಕಾಯುತ್ತಾರೆ. ಅವರ ಆಸೆಯ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದ್ದಾರೆ ಎಂದು ಟೀಕಿಸಿದರು.
ಮಾನ ಮರ್ಯಾದೆ ಇಲ್ಲದ ಸರಕಾರ ಇದು. ಕೂಡಲೇ ಅವರ ಖಾತೆಗೆ ಗೃಹಲಕ್ಷ್ಮಿ ಹಣ ಹಾಕಬೇಕೆಂದು ಆಗ್ರಹಿಸಿದರು. ನಾವು, ಮಹೇಶ್ ಟೆಂಗಿನಕಾಯಿಯವರು ಹುಡುಕಿದ ಕಾರಣ ಹಣ ಹಾಕದೇ ಇದ್ದುದು ಬೆಳಕಿಗೆ ಬಂತು. ಇಲ್ಲವಾದರೆ ಗೋವಿಂದ ಆಗುತ್ತಿತ್ತು ಎಂದು ಆಕ್ಷೇಪಿಸಿದರು. 5 ಸಾವಿರ ಕೋಟಿ ನುಂಗುತ್ತಿದ್ದರು. ಅದು ಗೊತ್ತೇ ಆಗುತ್ತಿರಲಿಲ್ಲ ಎಂದು ದೂರಿದರು. 10 ಜಿಲ್ಲೆಗೆ ಹಣ ಕೊಟ್ಟಿಲ್ಲ ಎಂದು ಟೀಕಿಸಿದರು.
ಜಿಲ್ಲಾ ಕಚೇರಿಗಳಿಂದ ಮಾಹಿತಿ ಕೇಳಿದರೆ ಕೊಡದಂತೆ ಎಲ್ಲರಿಗೂ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದರು. ಇದೇನು ಲೂಟಿ ಸರಕಾರವೇ? ಎಂದು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್ ಅವರು ಫ್ಲ್ಯಾಟ್ ಮಾಲೀಕರಿಗೆ ಧಮ್ಕಿ ಹಾಕುತ್ತಾರೆ. ಈ ಅಮ್ಮ ಅಧಿಕಾರಿಗಳಿಗೆ ಧಮ್ಕಿ ಹಾಕಿ ಮಾಹಿತಿ ಸಿಗದಂತೆ ಮಾಡಿದ್ದಾರೆ. ಇದನ್ನು ಸರಕಾರ ಎನ್ನುತ್ತಾರಾ ಎಂದು ಕೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮಹಿಳೆಯರಿಗೆ ಮೋಸ ಮಾಡಿದ್ದೇಕೆ ಎಂದು ಕೇಳಿದರು.