ನವದೆಹಲಿ, ಡಿ. 17 (DaijiworldNews/TA): ಶಾಪಿಂಗ್ಮಾಲ್, ಆಫೀಸ್ ಅಥವಾ ಮನೆಗೆ ಮರಳುವಾಗ ಕೆಲವರಿಗೆ ಲಿಫ್ಟ್ ಬಳಸೋ ಅಭ್ಯಾಸ. ಲಿಫ್ಟ್ ಬಾಗಿಲು ತೆರೆದ ಕೂಡಲೆ ಎದುರಾಗೋದು ದೊಡ್ಡ ಕನ್ನಡಿ. ಕೂದಲು ಚೆನ್ನಾಗಿ ಇಟ್ಟಿದ್ದೀರಾ ಅಂತ ನೋಡಿಕೊಳ್ಳೋಕೆ, ಸೆಲ್ಫಿ ತಗೋಳೋಕೆ ಇದೊಂದು ಮಸ್ತ್ ಜಾಗ. ಆದರೆ ಲಿಫ್ಟ್ನಲ್ಲಿ ಕನ್ನಡಿಯನ್ನು ಇದನ್ನು ಮೀರಿಸಿ, ಸೇಫ್ಟಿ ಮತ್ತು ಸೈಕಾಲಜಿಗೆ ಸಂಬಂಧಪಟ್ಟ ಹಲವಾರು ಕಾರಣಗಳಿಗಾಗಿ ಇರಿಸಲಾಗಿದೆ.

ಸೈಕಾಲಜಿಯ ರಹಸ್ಯ : ಲಿಫ್ಟ್ ಅಂದ್ರೆ ಒಂದು ಚಿಕ್ಕ ಡಬ್ಬಿ. ಒಳಗೆ ಹೋದಾಗ ನಾಲ್ಕು ಗೋಡೆಗಳು ಹತ್ತಿರ ಬರುವುದರಿಂದ ಕೆಲವರಿಗೆ ಉಸಿರುಗಟ್ಟುವ ಭಾವನೆ ಉಂಟಾಗುತ್ತದೆ, ಇದನ್ನು “ಕ್ಲಾಸ್ಟ್ರೋಫೋಬಿಯಾ” ಎಂದು ಕರೆಯುತ್ತಾರೆ. ಲಿಫ್ಟ್ನಲ್ಲಿ ಕನ್ನಡಿ ಇದ್ದಾಗ, ಪ್ರತಿಬಿಂಬದಿಂದ ಜಾಗ ಡಬಲ್ ಆದಂತೆ ಕಾಣುತ್ತದೆ. ಇದರಿಂದ ಜನರ ಭಯ ಮತ್ತು ಆತಂಕ ಕಡಿಮೆಯಾಗುತ್ತದೆ.
ಸೇಫ್ಟಿ ಮತ್ತು ಸುರಕ್ಷತೆ: ಲಿಫ್ಟ್ನಲ್ಲಿ ನಾವು ಮುಂದೆ ಮುಖಮಾಡಿ ನಿಂತಾಗ, ಹಿಂದೆ ಯಾರಿದ್ದಾರೆ, ಅವರ ಹಾವಭಾವ, ಕೈಯಲ್ಲೇ ಏನಿದೆ ಅನ್ನೋದು ಕನ್ನಡಿಯಿಂದ ಸುಲಭವಾಗಿ ಗಮನಿಸಬಹುದು. ಇದು ಕಳ್ಳತನ ಅಥವಾ ಅಸಭ್ಯ ವರ್ತನೆಗೆ ಬ್ರೇಕ್ ಹಾಕುತ್ತದೆ. ಸಿಸಿಟಿವಿ ಇದ್ದರೂ ಇಲ್ಲದಿದ್ದರೂ, ದೊಡ್ಡ ಕನ್ನಡಿ ತಪ್ಪು ಮಾಡುವವರಲ್ಲಿ ಭಯ ಮೂಡಿಸುತ್ತದೆ: “ನಾನು ಮಾಡೋದು ಎಲ್ಲರಿಗೂ ಕಾಣ್ಸುತ್ತೆ” ಎಂಬ ಭಾವನೆಯಿಂದ ತಪ್ಪು ಮಾಡದಂತೆ ತಡೆಯುತ್ತದೆ. ಲಿಫ್ಟ್ ಕನ್ನಡಿ ನಮ್ಮ ಸುರಕ್ಷತೆಗೆ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತದೆ.
ವೀಲ್ಚೇರ್ ಬಳಕೆದಾರರಿಗೆ ಸಹಾಯಕ : ವೀಲ್ಚೇರ್ ಬಳಸುವವರು ಲಿಫ್ಟ್ನಿಂದ ಹೊರಗೆ ಬರುವಾಗ ಹಿಂದೆ ಯಾರಿದ್ದಾರೆ, ಗೋಡೆಗೆ ಡಿಕ್ಕಿ ಹೊಡೆಯುವುದಿಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಲು ಕನ್ನಡಿ ಸಹಾಯ ಮಾಡುತ್ತದೆ. ಕಣ್ಣಡಿ ನೋಡಿಕೊಂಡು ನಿರ್ಬಂಧವಿಲ್ಲದೆ ಸುರಕ್ಷಿತವಾಗಿ ಹೊರಬರಬಹುದು.
ಇಷ್ಟೇ ಅಲ್ಲದೆ ಅಪರಿಚಿತರೊಂದಿಗೆ ಲಿಫ್ಟ್ನಲ್ಲಿ ನಿಂತಾಗ ಮೂಡುವ ಅಸಹಜ ಭಾವನೆ ಕಡಿಮೆಯಾಗುತ್ತದೆ. ನಾವು ನೆಲದ ಕಡೆ ನೋಡುವುದರ ಬದಲು, ಕನ್ನಡಿ ಮೂಲಕ ಗಮನ ನಮ್ಮ ಮೇಲೆ ಕೇಂದ್ರೀಕರಿಸಿ ಸಮಯವನ್ನು ವ್ಯರ್ಥ ಮಾಡದೆ ಕಳೆಯಬಹುದು. ಇದೇ ರೀತಿ, ಮದುವೆ, ಇಂಟರ್ವ್ಯೂ ಅಥವಾ ಕೆಲಸಕ್ಕೆ ಹೋಗುವ ಮೊದಲು ಡ್ರೆಸ್, ಮೇಕಪ್, ಹಲ್ಲು ಇತ್ಯಾದಿ ಚೆಕ್ ಮಾಡಿಕೊಳ್ಳಲು ಕನ್ನಡಿ ತುಂಬಾ ಉಪಯುಕ್ತವಾಗಿದೆ. ಇದು ಕಾನ್ಫಿಡೆನ್ಸ್ ಹೆಚ್ಚಿಸಲು ಸಹಾಯ ಮಾಡುತ್ತದೆ.
ನೋಡಿದ್ರೆ, ಲಿಫ್ಟ್ ಕನ್ನಡಿ ಕೇವಲ ಫ್ಯಾಷನ್ ಶೈಲಿ ಮಾತ್ರವಲ್ಲ. ಸುರಕ್ಷತೆ, ಮನೋವೈಜ್ಞಾನಿಕ ಶಾಂತಿ, ಅಪಘಾತ ತಡೆ, ತ್ವರಿತ ಸ್ವಯಂ ಪರಿಶೀಲನೆ ಎಲ್ಲಕ್ಕೂ ಈ ಕನ್ನಡಿ ನೆರವಾಗುತ್ತದೆ. ಮುಂದಿನ ಸಲ ಲಿಫ್ಟ್ ಹತ್ತುವಾಗ, ಸೆಲ್ಫಿ ತೆಗೆದುಕೊಳ್ಳೋ ಜೊತೆಗೆ, ಈ ಸುಗಮ ಐಡಿಯಾ ಮಾಡಿದವರಿಗೂ ಧನ್ಯವಾದ ಹೇಳಿ.