ಮುಂಬೈ, ಡಿ. 17 (DaijiworldNews/AA): ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ್ ಆರಂಭಿಸಿದ ಮೊದಲ ದಿನವೇ ಭಾರತ ಸೋಲನ್ನು ಅನುಭವಿಸಿತು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾನು ಯಾವುದೇ ತಪ್ಪು ಹೇಳಿಲ್ಲ ಮತ್ತು ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ. ನಮ್ಮ ಸಂವಿಧಾನವು ನನಗೆ ಪ್ರಶ್ನಿಸುವ ಹಕ್ಕನ್ನು ನೀಡಿದೆ ಎಂದು ಹೇಳಿರುವ ಅವರು, ತಾವು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರೂ ಅವರು ಕ್ಷಮೆ ಕೇಳಲು ನಿರಾಕರಿಸಿದ್ದಾರೆ.
"ಆಪರೇಷನ್ ಸಿಂಧೂರ್ನ ಮೊದಲ ದಿನದಂದೇ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಮೇ 7ರಂದು ನಡೆದ ಅರ್ಧ ಗಂಟೆಯ ವೈಮಾನಿಕ ಕಾರ್ಯಾಚರಣೆಯಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಭಾರತೀಯ ವಿಮಾನಗಳನ್ನು ಹೊಡೆದುರುಳಿಸಲಾಯಿತು. ಭಾರತದ ವಾಯುಪಡೆ ಸಂಪೂರ್ಣವಾಗಿ ನೆಲಸಮವಾಗಿತ್ತು. ನಮ್ಮ ಒಂದೇ ಒಂದು ವಿಮಾನವೂ ಹಾರಲಿಲ್ಲ" ಎಂದು ತಿಳಿಸಿದ್ದಾರೆ.
"ಇತ್ತೀಚೆಗೆ, ಆಪರೇಷನ್ ಸಿಂಧೂರ್ ಸಮಯದಲ್ಲಿ, ಮಿಲಿಟರಿಯ ಒಂದು ಕಿಲೋಮೀಟರ್ ಚಲನೆಯೂ ಇರಲಿಲ್ಲ. ಎರಡು ಅಥವಾ ಮೂರು ದಿನಗಳಲ್ಲಿ ಕೇವಲ ವೈಮಾನಿಕ ಯುದ್ಧ ಮತ್ತು ಕ್ಷಿಪಣಿ ಯುದ್ಧ ನಡೆಯಿತು. ಭವಿಷ್ಯದಲ್ಲಿಯೂ ಸಹ ಯುದ್ಧಗಳು ಅದೇ ರೀತಿಯಲ್ಲಿ ನಡೆಯುತ್ತವೆ. ಹಾಗಿದ್ದ ಮೇಲೆ ನಾವು ನಿಜವಾಗಿಯೂ 12 ಲಕ್ಷ ಸೈನಿಕರ ಸೈನ್ಯವನ್ನು ನಿರ್ವಹಿಸುವ ಅಗತ್ಯವಿದೆಯೇ? ಅಷ್ಟು ದೊಡ್ಡ ಸೇನಾಪಡೆ ನಮಗೆ ನಿಜಕ್ಕೂ ಅನಿವಾರ್ಯವೇ? ನಾವು ಅವರನ್ನು ಬೇರೆ ಏನಾದರೂ ಕೆಲಸ ಮಾಡುವಂತೆ ಮಾಡಬಹುದಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.