ಬೆಂಗಳೂರು, ಡಿ. 17 (DaijiworldNews/TA): ಪಕ್ಷಿ ಪ್ರೇಮಿಗಳಿಗೆ ಆರೋಗ್ಯ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವ ಅಭ್ಯಾಸ ಇನ್ನು ಮುಂದೆ ಸಮಸ್ಯೆಗೆ ಕಾರಣವಾಗಲಿದೆ. ನಿಗದಿತ ಸ್ಥಳಗಳನ್ನು ಬಿಟ್ಟು ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಕಾಳು ಹಾಕಿದರೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಕ್ರಮ ಜಾರಿಗೆ ಬರಲಿದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಆರೋಗ್ಯ ಇಲಾಖೆಯ ಡೆಪ್ಯೂಟಿ ಕಮಿಷನರ್ ವಿ. ಲಕ್ಷ್ಮಿನಾಥ್ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದು, ಗ್ರೇಟರ್ ಬೆಂಗಳೂರು ಏರಿಯಾ ವ್ಯಾಪ್ತಿಯಲ್ಲಿ ಈ ಸಂಬಂಧ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸೂಚಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದರಿಂದ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟಾಗುತ್ತಿದೆ ಎಂಬುದು ಇಲಾಖೆಯ ಮುಖ್ಯ ಆತಂಕವಾಗಿದೆ.
ಪಾರಿವಾಳಗಳ ಹಿಕ್ಕೆಗಳು, ಗರಿಗಳು ಹಾಗೂ ಧೂಳಿನಿಂದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದ ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರಿಗೆ ಹೆಚ್ಚಿನ ಅಪಾಯ ಎದುರಾಗುತ್ತದೆ. ಪಾರಿವಾಳಗಳ ಹಿಕ್ಕೆಗಳಲ್ಲಿ ಕ್ರಿಪ್ಟೋಕಾಕಸ್ ಫಂಗಸ್ ಹಾಗೂ ಹಿಸ್ಟೋಪ್ಲಾಸ್ಮೋಸಿಸ್ ರೋಗಾಣುಗಳು ಇರುವ ಸಾಧ್ಯತೆ ಇದ್ದು, ಇವು ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 270, 271 ಮತ್ತು 272 ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ಈ ಸೆಕ್ಷನ್ಗಳ ಅಡಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅಧಿಕಾರವಿದೆ ಎಂದು ಆರೋಗ್ಯ ಇಲಾಖೆಯ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಆರೋಗ್ಯ ಇಲಾಖೆಯ ಪತ್ರದಲ್ಲಿ ಬಾಂಬೆ ಹೈಕೋರ್ಟ್ ನೀಡಿರುವ ನಿರ್ದೇಶನಗಳನ್ನು ಉಲ್ಲೇಖಿಸಲಾಗಿದ್ದು, ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ಜಾರಿಯಲ್ಲಿರುವ ನಿಯಂತ್ರಣ ಕ್ರಮಗಳನ್ನು ಅನುಸರಿಸಲು ಒತ್ತಾಯಿಸಲಾಗಿದೆ. ಮುಂಬೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಿ ದಂಡ ವಿಧಿಸಲಾಗುತ್ತಿದೆ. ಪುಣೆಯಲ್ಲಿ ಈ ಕ್ರಮದಿಂದ ಆರೋಗ್ಯ ಅಪಾಯಗಳನ್ನು ನಿಯಂತ್ರಿಸಲಾಗಿದೆ ಎಂಬ ಉದಾಹರಣೆಗಳನ್ನು ನೀಡಲಾಗಿದೆ.
ಬೆಂಗಳೂರು ನಗರಪಾಲಿಕೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ಪಾರಿವಾಳಗಳಿಗೆ ಆಹಾರ ಹಾಕಲು ಅವಕಾಶ ಇರಲಿದೆ. ಸಾರ್ವಜನಿಕ ಪಾರ್ಕ್ಗಳು, ರಸ್ತೆಗಳು, ದೇವಸ್ಥಾನಗಳ ಸುತ್ತಮುತ್ತ ಹಾಗೂ ಅಪಾರ್ಟ್ಮೆಂಟ್ ಪ್ರದೇಶಗಳಲ್ಲಿ ಆಹಾರ ಹಾಕುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಸೂಚನೆ ನೀಡಲಾಗಿದೆ. ಪಾರಿವಾಳಗಳ ಸಂಖ್ಯೆ ನಿಯಂತ್ರಣಕ್ಕೆ ಬಂದರೆ ನಗರದಲ್ಲಿ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂಬುದು ಇಲಾಖೆಯ ಅಭಿಪ್ರಾಯವಾಗಿದೆ.
ಆದ್ದರಿಂದ ನಾಗರಿಕರು ಪಾರಿವಾಳಗಳಿಗೆ ಆಹಾರ ಹಾಕುವ ಮೊದಲು ಎಚ್ಚರ ವಹಿಸಬೇಕು. ಸಾರ್ವಜನಿಕ ಆರೋಗ್ಯ ಮತ್ತು ನಗರ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು, ಈ ಅಭ್ಯಾಸವನ್ನು ತ್ಯಜಿಸಿ ನಿಗದಿತ ಸ್ಥಳಗಳನ್ನು ಮಾತ್ರ ಬಳಸುವ ಮೂಲಕ ಆಡಳಿತಕ್ಕೆ ಸಹಕಾರ ನೀಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.