ಅಸ್ಸಾಂ, ಡಿ. 17 (DaijiworldNews/TA): ಭಾರತದಲ್ಲಿ ಚಹಾ ಎಂದರೆ ಕೇವಲ ಪಾನೀಯವಲ್ಲ, ಅದು ಭಾವನೆ. ಒತ್ತಡದ ಸಮಯದಲ್ಲಾಗಲಿ, ಸಂತೋಷದ ಕ್ಷಣಗಳಲ್ಲಾಗಲಿ, ಒಂದು ಕಪ್ ಚಹಾ ಅನಿವಾರ್ಯ. ಸಾಮಾನ್ಯವಾಗಿ ಭಾರತದಲ್ಲಿ 10 ರೂಪಾಯಿಗೆ ಚಹಾ ಸಿಗುತ್ತದೆ. ಆದರೆ ಇದಕ್ಕೆ ವಿರುದ್ಧವಾಗಿ, ಇಲ್ಲಿ ತಯಾರಾಗುವ ಒಂದು ವಿಶೇಷ ಚಹಾ ಪುಡಿ ಲಕ್ಷಾಂತರ ರೂಪಾಯಿಗಳ ಮೌಲ್ಯವನ್ನು ಹೊಂದಿದೆ.

ಭಾರತ ವಿಶ್ವದಾದ್ಯಂತ ವಿವಿಧ ವಿಚಾರಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲೂ ದುಬಾರಿ ವಸ್ತುಗಳ ವಿಚಾರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಹೊಸದೇನಲ್ಲ. ಇದೀಗ ಮತ್ತೊಮ್ಮೆ ಭಾರತ ಒಂದು ಅಚ್ಚರಿ ಸುದ್ದಿಯಿಂದ ಗಮನ ಸೆಳೆದಿದೆ ಅದು ದುಬಾರಿ ಚಹಾ.
ಈ ಅಪರೂಪದ ಚಹಾವನ್ನು ಭಾರತದಲ್ಲಿನ ಕೆಲವೇ ವಿಶೇಷ ತೋಟಗಳಲ್ಲಿ ಸೀಮಿತ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಈ ಚಹಾ ಪುಡಿಯನ್ನು ಸಾಮಾನ್ಯ ಜನರು ಬಳಸುವುದಿಲ್ಲ. ಹೆಚ್ಚಿನ ಹಣ ಕೊಟ್ಟು ಖರೀದಿಸುವ ವಿಶೇಷ ಗ್ರಾಹಕರೇ ಇದರ ಬಳಕೆದಾರರು. ವೈನ್ ಸಂಗ್ರಹಿಸುವಂತೆ, ಈ ಚಹಾವನ್ನೂ ಸಂಗ್ರಹಿಸಿ ಇಡುವ ಸಂಸ್ಕೃತಿ ಇದೆ. ಸಮಯ ಕಳೆದಂತೆ ಅದರ ರುಚಿ ಮತ್ತು ಸುವಾಸನೆ ಹೆಚ್ಚಾಗುತ್ತಿದ್ದು, ಅದೇ ಇದರ ಬೆಲೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಅಂತರರಾಷ್ಟ್ರೀಯ ಚಹಾ ದಿನದಂದು, ಭಾರತದಲ್ಲಿ ತಯಾರಿಸಲಾದ ಆರು ಅತ್ಯಂತ ದುಬಾರಿ ಚಹಾ ಪುಡಿಗಳನ್ನು ಗುರುತಿಸಲಾಗಿದೆ. ಈ ಪಟ್ಟಿಯಲ್ಲಿ ಅಸ್ಸಾಂನ ಪ್ರಸಿದ್ಧ ಚಹಾ ಒಂದಾಗಿದೆ. ಆ ಆರು ದುಬಾರಿ ಚಹಾಗಳಲ್ಲಿ ಪ್ರಮುಖವಾದುದು ಮನೋಹರಿ ಗೋಲ್ಡ್ ಟೀ. ಇದು ಅಸ್ಸಾಂ ರಾಜ್ಯದಲ್ಲಿ ಬೆಳೆಯುವ ಅಪರೂಪದ ಚಹಾ. ಈ ಚಹಾ ಎಲೆಗಳನ್ನು ಕೈಯಿಂದಲೇ ಕೀಳಲಾಗುತ್ತದೆ. ಇದರ ಗುಣಮಟ್ಟ, ರುಚಿ ಮತ್ತು ಸುವಾಸನೆ ಇದನ್ನು ವಿಶಿಷ್ಟವಾಗಿಸುತ್ತವೆ.
ಗುವಾಹಟಿಯಲ್ಲಿ ನಡೆದ ಹರಾಜಿನಲ್ಲಿ ಈ ಚಹಾ ಎಲ್ಲ ದಾಖಲೆಗಳನ್ನು ಮುರಿದಿದೆ. 2022ರಲ್ಲಿ ಮನೋಹರಿ ಗೋಲ್ಡ್ ಚಹಾವನ್ನು ಪ್ರತಿ ಕೆಜಿಗೆ ರೂ. 1.15 ಲಕ್ಷಗೆ ಮಾರಾಟ ಮಾಡಲಾಗಿದೆ. ಇದರಿಂದಾಗಿ ಇದು ಭಾರತದ ಅತ್ಯಂತ ದುಬಾರಿ ಚಹಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಸಾಮಾನ್ಯ ಚಹಾದಿಂದ ಹಿಡಿದು ಲಕ್ಷಾಂತರ ಬೆಲೆಯ ಚಹಾವರೆಗೆ, ಭಾರತದ ಚಹಾ ಪರಂಪರೆ ಇಂದು ವಿಶ್ವದ ಗಮನ ಸೆಳೆಯುತ್ತಿದೆ.