ಹೈದರಾಬಾದ್, ಡಿ. 17 (DaijiworldNews/AA): ಆಸ್ಟ್ರೇಲಿಯಾದ ಬೊಂಡಿ ಬೀಚ್ನಲ್ಲಿ ಯಹೂದಿಗಳ ಮೇಲೆ ಗುಂಡಿನ ದಾಳಿ ನಡೆಸಿ 16 ಜನರನ್ನು ಹತ್ಯೆ ಮಾಡಿದ ಇಬ್ಬರು ಬಂದೂಕುಧಾರಿ ತಂದೆ ಮತ್ತು ಮಗ ಭಾರತೀಯ ಮೂಲದವರು ಎಂಬುದು ಬೆಳಕಿಗೆ ಬಂದಿದೆ.

ಈಗಾಗಲೇ ಆರೋಪಿ ಸಾಜಿದ್ ಅಕ್ರಮ್(50) ಎಂಬಾತನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ಆತನ ಮಗ ನವೀದ್ ಅಕ್ರಮ್(24) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಮಧ್ಯೆ ಹತ್ಯೆಯಾದ ಸಾಜಿದ್ ಅಕ್ರಮ್ ಮೂಲತಃ ಭಾರತೀಯ ವ್ಯಕ್ತಿ ಎಂದು ಹೇಳಲಾಗುತ್ತಿದೆ.
ಸಾಜಿದ್ ಮೂಲತಃ ಹೈದರಾಬಾದ್ನವನಾಗಿದ್ದು, 1998ರ ನವೆಂಬರ್ನಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿದ್ದನಂತೆ. ಉದ್ಯೋಗ ಅರಸಿ ಭಾರತ ತೊರೆಯುವ ಮುನ್ನ ಹೈದರಾಬಾದ್ನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪೂರ್ಣಗೊಳಿಸಿದ್ದ. ವಲಸೆ ಹೋಗಿದ್ದರೂ ಆತ ಭಾರತದ ಪಾಸ್ಪೋರ್ಟ್ ಹೊಂದಿದ್ದ ಎಂದು ತೆಲಂಗಾಣ ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಅಕ್ರಂ ಸುಮಾರು 27 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದ, ಹೈದರಾಬಾದ್ನ ತನ್ನ ಕುಟುಂಬದೊಂದಿಗೂ ಸೀಮಿತ ಸಂಪರ್ಕ ಹೊಂದಿದ್ದ. ಕೌಟುಂಬಿಕ ಕಲಹಗಳಿಂದಾಗಿ ಹೈದರಾಬಾದ್ನಲ್ಲಿರುವ ತನ್ನ ಕುಟುಂಬದೊಂದಿಗೆ ಕೆಲ ವರ್ಷಗಳಿಂದ ಸಂಬಂಧ ಕಡಿದುಕೊಂಡಿದ್ದ. 2017ರಲ್ಲಿ ಅಕ್ರಂ ತಂದೆ ತೀರಿಕೊಂಡಾಗಲೂ ಆತ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಆದರೆ ಆಮೂಲಾಗ್ರ ಬದಲಾವಣೆ ಮಾಡುವ ಅಥವಾ ಭಾರತದಲ್ಲಿ ಉಗ್ರ ಕೃತ್ಯ ಎಸಗುವ ಕಾರ್ಯಾಚರಣೆಯ ಬಗ್ಗೆ ಯಾವುದೇ ಸುಳಿವು, ಅನುಮಾಮನ ಇರಲಿಲ್ಲ ಎಂದು ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಂ 2022 ರಲ್ಲಿ ಹೈದರಾಬಾದ್ಗೆ ಕೊನೆಯ ಬಾರಿಗೆ ಭೇಟಿ ನೀಡಿದ್ದ. ಹಾಗಾಗಿ ಭಾರತೀಯ ಪಾಸ್ಪೋರ್ಟ್ ಅನ್ನು ಮುಂದುವರೆಸಿದ್ದ. ಆಸ್ಟ್ರೇಲಿಯಾಕ್ಕೆ ಬಂದ ವಲಸೆ ಬಳಿಕ ವೆನೆರಾ ಗ್ರೊಸೊ ಎಂಬ ಯುರೋಪಿಯನ್ ಮೂಲದ ಮಹಿಳೆಯನ್ನ ವಿವಾಹವಾಗಿದ್ದ. ಅಕ್ರಂಗೆ ಓರ್ವ ಮಗ, ಒಬ್ಬಳು ಮಗಳಿದ್ದಾಳೆ. ಅವರು ಆಸ್ಟ್ರೇಲಿಯಾದ ಪ್ರಜೆಗಳೇ ಆಗಿದ್ದಾರೆ ಎನ್ನಲಾಗಿದೆ.