National
ಚಿಕ್ಕಮಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಕೊಂಕಣಿ ಕಲೋತ್ಸವ ಕಾರ್ಯಕ್ರಮ
- Tue, Dec 16 2025 04:55:28 PM
-
ಚಿಕ್ಕಮಗಳೂರು,ಡಿ. 16 (DaijiworldNews/AK): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಡಿ.೧೪ ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕೊಂಕಣಿ ಕಲೋತ್ಸವ ಕಾರ್ಯಕ್ರಮ ಜರಗಿತು.






ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಅಲ್ವಾರೆಸ್ ರವರು ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಮ್ಮ ಭಾಷೆ, ಸಂಸ್ಕೃತಿಯನ್ನು ಜನರಿಗೆ ಪರಿಚಯಿಸಲು ಹಾಗೂ ನಮ್ಮಲ್ಲಿರುವ ಒಗ್ಗಟ್ಟನ್ನು ತೋರಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮ ಕೊನೆಗೊಳ್ಳುವ ತನಕ ಎಲ್ಲರೂ ನಿಂತು ಕಲೆ, ಸಾಹಿತ್ಯವನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿ, ನೆರೆದವರೆಲ್ಲರನ್ನೂ ಸ್ವಾಗತಿಸಿದರು. ಗುಮಟ್ ಬಾರಿಸುವುದರ ಮೂಲಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಧರ್ಮಗುರುಗಳಾದ ಫಾ. ಜೋಯ್ ರೆಜಿನಾಲ್ಡ್ ಪಾಯ್ಸ್ ರವರು ಮಾತನಾಡಿ, ಕೊಂಕಣಿ ಸಂಸ್ಕೃತಿಯಲ್ಲಿ ಬೆಳೆದ ನಾನು, ಕೊಂಕಣಿ ಭಾಷೆ, ಶಿಕ್ಷಣವನ್ನು ಯಾವ ಊರಿಗೆ ಹೋದರೂ ಮರೆಯಲು ಸಾಧ್ಯವಿಲ್ಲ. ಇದರಿಂದ ಕೊಂಕಣಿ ಸಂಸ್ಕೃತಿ ಉಳಿಯಲು ಸಾಧ್ಯ' ಎಂದರು.
ಗೌರವ ಅತಿಥಿಗಳಾಗಿದ್ದ ವಿಧಾನಪರಿಷತ್ ಸದಸ್ಯರಾದ ಸಿ.ಟಿ ರವಿ ಅವರು ಮಾತನಾಡಿ, ನಾವು ಅಭಿಮಾನದಿಂದ ಭಾಷೆಯನ್ನು ಬಳಸಿದರೆ ಮಾತ್ರ ಭಾಷೆ ಬೆಳೆಯುತ್ತದೆ. ಭಾಷೆಯನ್ನು ಪರಿಚಯಿಸುತ್ತಾ ಮಕ್ಕಳಿಗೆ ಸಂಬಂಧಗಳನ್ನು ಪರಿಚಯಿಸಬೇಕು. ಕೊಂಕಣಿಯು ಶ್ರೀಮಂತವಾಗಿ ಸಮೃದ್ದವಾಗಿರುವ ಭಾಷೆಯಾಗಿದ್ದು, ಕೊಂಕಣಿ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೊಂಕಣಿ ಭಾಷೆಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಎಂದರು. ನಮ್ಮ ಮಾತೃಭಾಷೆಗಳನ್ನು ಯಾವತ್ತೂ ನಾವು ಗೌರವಿಸಬೇಕು.
ಚಿಕ್ಕಮಗಳೂರಿನ ಧರ್ಮಗುರುಗಳಾದ ಫಾ| ಶಾಂತರಾಜ್ ಆರ್., ಫಾ| ಸಂಜಯ್ ಡಿಸೋಜ, ಸ್ಥಳೀಯ ಮುಖಂಡರಾದ ಶ್ರೀ ನರೇಂದ್ರ ಪೈ, ಚಿಕ್ಕಮಗಳೂರಿನ ಕಾಫಿ ಪ್ಲಾಂಟರ್ ಶ್ರೀ ಸ್ಟ್ಯಾನಿ ಡಿಸಿಲ್ವ, ಕಥೊಲಿಕ್ ಕೊಂಕಣಿ ರಾಕಣ್ ಸಂಚಾಲನ್ ಅಧ್ಯಕ್ಷರಾದ ಶ್ರೀ ಜೋಕಿಂ ಡಿಸೋಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಲ್ವಿನ್ ವಿನೋದ್ ಪಿಂಟೊ ಕಾರ್ಯಕ್ರಮವನ್ನು ನಿರೂಪಿಸಿದರು. ತದನಂತರ ಕುವೆಂಪು ಕಲಾಮಂದಿರದಿಂದ ಐ.ಜಿ. ರಸ್ತೆಯ ಮೂಲಕ ಸಾಗಿ, ಹನುಮಂತಪ್ಪ ಸರ್ಕಲ್ ನಿಂದ, ಎಂ.ಜಿ. ರಸ್ತೆಯ ಮುಖಾಂತರ ಕುವೆಂಪು ಕಲಾಮಂದಿರಕ್ಕೆ ವಿವಿಧ ಸಾಂಸ್ಕೃತಿಕ ಕಲಾತಂಡಗಳನ್ನೊಳಗೊಂಡ ಬೃಹತ್ ಸಾಂಸ್ಕೃತಿಕ ಮೆರವಣಿಗೆಯು ನಡೆಯಿತು. ಸುಮಾರು 1000ಕ್ಕೂ ಮಿಗಿಲಾಗಿ ಕಲಾವಿದರು ಹಾಗೂ ಚಿಕ್ಕಮಗಳೂರಿನ ಕೊಂಕಣಿ ಭಾಷಾಭಿಮಾನಿಗಳ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ರವರು ಮಾತನಾಡಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಕೊಂಕಣಿ ಜನರಿರುವ ಕಡೆ ಹೋಗಿ, ಕೊಂಕಣಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೊಂಕಣಿ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ. ಈ ಸಾಂಸ್ಕೃತಿಕ ಮೆರವಣಿಗೆಯು ಕೊಂಕಣಿ ಭಾಷಾಭಿಮಾನಿಗಳ ಸ್ವಾಭಿಮಾನವನ್ನು ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಿದೆ. ಚಿಕ್ಕಮಗಳೂರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಕಣಿ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಒಲವು ಮೂಡಿಸಲು ಈ ಮೆರವಣಿಗೆಯು ನಾಂದಿಯಾಗಲಿʼ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಹರ್ಷ ಮೆಲ್ವಿನ್ ಲಸ್ರಾದೊರವರು ಕೊಂಕಣಿ ಸಂಸ್ಕೃತಿಯ ಒಂದು ಪ್ರಕಾರವಾದ ಬ್ಯಾಂಡ್ ಬಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರು ಮಾತನಾಡಿ, ಕೊಂಕಣಿ ಸಂಸ್ಕೃತಿಯನ್ನು ಬಿಂಬಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರಿಂದ, ಕೊಂಕಣಿ ಭಾಷೆ, ಸಂಸ್ಕೃತಿ ಯು ಉಳಿಯುತ್ತದೆ. ಕೊಂಕಣಿ ಭಾಷೆ ಉಳಿಯಲಿ, ಬೆಳೆಯಲಿ ಎಂದು ಕೊಂಕಣಿ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಬೋಜೆಗೌಡ ರವರು ಮಾತನಾಡಿ, ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಕಲೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡು, ಸಂಸ್ಕೃತಿಯ ಪ್ರತೀಕವಾದ ವಿವಿಧ ಸಮುದಾಯಗಳ ಸಾಹಿತ್ಯವನ್ನು ಜನರಿಗೆ ಪರಿಚಯಿಸುವ ಪ್ರಯತ್ನವನ್ನು ನಡೆಸಿದೆ. ಕೊಂಕಣಿ ಅಕಾಡೆಮಿಯು ಎಲ್ಲರಿಗೂ ಪರಿಚಯವಾಗಬೇಕು. ಕೊಂಕಣಿ ಸಾಹಿತ್ಯವು ನಾಡಿನಲ್ಲಿ ಬೆಳೆದು, ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು' ಎಂದು ಹೇಳಿದರು.
ತಿಂಗಳ ವ್ಯಕ್ತಿಯಾಗಿ ಚಿಕ್ಕಮಗಳೂರಿನ ಸಾಹಿತಿಯಾದ ಲವ್ರೆಂತ್ ಚಿಕ್ಕಮಗಳೂರು ಹೆಸರಲ್ಲೇ ಖ್ಯಾತಿಯಾದ ಲೋರೆನ್ಸ್ ಡಿಸೋಜರವರನ್ನು ಸನ್ಮಾನಿಸಲಾಯಿತು.
ಅತಿಥಿ ಗಣ್ಯರಾದ ಎಂ.ಸಿ.ಸಿ. ಬ್ಯಾಂಕ್ ಮಂಗಳೂರಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊರವರು ಮಾತನಾಡಿ, ಹಲವು ವ್ಯಕ್ತಿಗಳು ಕೊಂಕಣಿ ಭಾಷೆಗಾಗಿ ಶ್ರಮಿಸಿ, ಹಲವು ಕೊಂಕಣಿ ಸಂಸ್ಥೆಗಳನ್ನು ಕಟ್ಟಿದ್ದಾರೆ. ಪೂರ್ವಜರು ಕಟ್ಟಿಕೊಂಡು ಬಂದ ಕೊಂಕಣಿ ಸಂಸ್ಕೃತಿಯನ್ನು ಉಳಿಸೋಣ ಎಂದು ಹೇಳಿದರು.
ದಿ. ಎರಿಕ್ ಒಝೇರಿಯೊರವರ ಧರ್ಮಪತ್ನಿ ಜೋಯ್ಸ್ ಒಝೇರಿಯೊರವರನ್ನು ಕಥೊಲಿಕ್ ಕೊಂಕಣಿ ರಾಕಣ್ ಸಂಚಾಲನದ ವತಿಯಿಂದ ಸನ್ಮಾನಿಸಲಾಯಿತು.
ಚಿಕ್ಕಮಗಳೂರಿನ ಜನತೆಗೆ ಏರ್ಪಡಿಸಲಾದ ವಿವಿಧ ವಿನೋದಾವಳಿ ಸ್ಪರ್ಧೆಗಳ ವಿಜೇತರಿಗೆ ಹಾಗೂ ಉತ್ತಮ ಕಾರ್ಯಕ್ರಮ ನಿರೂಪಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಮೂಡಿಗೆರೆ ತಂಡವು ಪ್ರಥಮ, ಕೊಂಕಣಿ ಕುಟಮ್, ಸಕ್ಲೇಶ್ ಪುರ ತಂಡವು ದ್ವಿತೀಯ, ಚಿಕ್ಕಮಗಳೂರು ತಂಡವು ತೃತೀಯ ಸ್ಥಾನವನ್ನು ಹಾಗೂ ಅತೀ ಉತ್ತಮ ಕಾರ್ಯಕ್ರಮ ನಿರೂಪಣೆಯಲ್ಲಿ ಕೊಂಕಣಿ ಕುಟಮ್ ಸಕ್ಲೇಶ್ ಪುರ ತಂಡದ ಪ್ರವೀಣ್ ವೇಗಸ್ ಪ್ರಥಮ, ಮೂಡಿಗೆರೆ ತಂಡದ ಝೀಟಾ ಲೋಬೊ ದ್ವಿತೀಯ, ಚಿಕ್ಕಮಗಳೂರು ತಂಡದ ಪ್ರವೀಣ್ ಪಿಂಟೊ ತೃತೀಯ ಸ್ಥಾನವನ್ನು ಪಡೆದುಕೊಂಡರು.
ವೇದಿಕೆಯಲ್ಲಿ ಚಿಕ್ಕಮಗಳೂರಿನ ಕಾಫಿ ಫ್ಲಾಂಟರ್ ಸ್ಟ್ಯಾನಿ ಡಿಸಿಲ್ವ, ಕಥೊಲಿಕ್ ಕೊಂಕಣಿ ರಾಕಣ್ ಸಂಚಾಲನ್ ಅಧ್ಯಕ್ಷರಾದ ಜೋಕಿಂ ಡಿಸೋಜ, ಮಾಜಿ ಅಧ್ಯಕ್ಷರಾದ ಸಿರಿಲ್, ಅಕಾಡೆಮಿಯ ಸದಸ್ಯ ಸಂಚಾಲಕರಾದ ಪ್ರಮೋದ್ ಪಿಂಟೊ, ಅಕಾಡೆಮಿ ರಿಜಿಸ್ಟ್ರಾರ್ರಾಜೇಶ್ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮವು ನಡೆಯಿತು. ಜೆನಿಫರ್ ವಾಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ರೋನಿ ಕ್ರಾಸ್ತಾ , ನವಿನ್ ಲೋಬೋ ಬಜಲ್ , ದಯಾನಂದ ಮಡ್ಕೇಕರ್, ಸಪ್ನಾ ಕ್ರಾಸ್ತಾ ಹಾಜರಿದ್ದರು.