ಬೆಳಗಾವಿ, ಡಿ. 16 (DaijiworldNews/AK):ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತೆ ಎಂಬ ಅಘಾತಕಾರಿ ಸುದ್ದಿ ವಿಚಾರವಾಗಿ ಮೊಟ್ಟೆಗಳ ಪರಿಶೀಲನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಅತಂಕ ವಿಷಯ ಕುರಿತು ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ವಿಷಯ ಪ್ರಸ್ತಾಪ ಮಾಡಿದರು. ಭಾರತ ಮೊಟ್ಟೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಪೌಷ್ಟಿಕಾಹಾರವಾಗಿ ಮೊಟ್ಟೆ ಬಳಕೆ ಮಾಡಲಾಗುತ್ತಿದೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ. ಈಗ ಮೊಟ್ಟೆ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಅಂತ ಎಗೋಸ್ ಕಂಪನಿ ಅಪಪ್ರಚಾರ ಮಾಡುತ್ತಿದೆ. ಇಂತಹ ಅಪಪ್ರಚಾರ ಮಾಡುವ ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿ ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಿದರು.
ಇದಕ್ಕೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಿ, ಮೊಟ್ಟೆ ವಿಷಯ ಚರ್ಚೆ ಆಗುತ್ತಿದೆ. ಕಳೆದ ವರ್ಷ 124 ಮಾದರಿ ಮೊಟ್ಟೆಗಳನ್ನ ಪರೀಕ್ಷೆಗೆ ಒಳಪಡಿಸಿದ್ದೇವೆ. ಇದರಲ್ಲಿ 123 ಮೊಟ್ಟೆ ಸರಿಯಾಗಿ ಇದೆ ಅಂತ ವರದಿ ಬಂದಿತ್ತು. ಮೊನ್ನೆಯಿಂದ ಬಂದಿರೋ ಮೊಟ್ಟೆ ವಿಷಯದ ಮಾಹಿತಿ ಗೊತ್ತಿಲ್ಲ. ಎಗೋಸ್ ಕಂಪನಿಯ ಮೊಟ್ಟೆ ತಪಾಸಣೆ ಮಾಡ್ತಾ ಇದ್ದೇವೆ. ಆ ಕಂಪನಿ ಮೊಟ್ಟೆ ಜೊತೆಗೆ ಬೇರೆ ಬೇರೆ ಮೊಟ್ಟೆಗಳ ಸ್ಯಾಂಪಲ್ ತಗೊಂಡಿದ್ದೇವೆ. ಮೊಟ್ಟೆಗಳ ಪರೀಕ್ಷೆ ಆಗುತ್ತಿದೆ. 3-4 ದಿನಗಳಲ್ಲಿ ವರದಿ ಬರಲಿದೆ ಎಂದರು.
ಮೊಟ್ಟೆ ವಿಚಾರದಲ್ಲಿ ಜನರು ಅತಂಕ ಪಡೋದು ಬೇಡ. ಇದರ ತನಿಖೆ ಆಗುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತಾಡೋಕೆ ನಮ್ಮ ಇಲಾಖೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.