ಹಾಸನ, ಡಿ. 16 (DaijiworldNews/AA): ಸೈಕಲ್ನಲ್ಲಿ ಆಟವಾಡುತ್ತಿದ್ದ ವೇಳೆ ಆಯತಪ್ಪಿ ನೀರಿನ ಸಂಪ್ಗೆ ಬಿದ್ದು 4 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನದ ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕನನ್ನು ಎಡನ್ ಸ್ವೀವ್ (4) ಎಂದು ಗುರುತಿಸಲಾಗಿದೆ.
ಮನೆಯ ಮುಂದೆ ಎಡನ್ ಸ್ವೀವ್ ಆಟವಾಡುತ್ತಿದ್ದನು. ಈ ವೇಳೆ ಪೋಷಕರು ಮನೆಯೊಳಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮನೆಯಿಂದ ಹೊರ ಬಂದ ಪೋಷಕರು ಮಗುವನ್ನು ಹುಡುಕಿದ್ದಾರೆ. ಈ ವೇಳೆ ನೀರಿನ ಸಂಪ್ ಬಳಿ ಮಗುವಿನ ಸೈಕಲ್ ಬಿದ್ದಿದ್ದು ಸಂಪ್ ಪರಿಶೀಲಿಸಿದಾಗ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ತಕ್ಷಣ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ಯಲಾಯಿತು. ಆದರೆ ಅದಾಗಲೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹಾಸನ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.