ದೆಹಲಿ, ಡಿ. 11 (DaijiworldNews/AA): ದೇಶದ ಅರ್ಥವ್ಯವಸ್ಥೆ ವೇಗವಾಗಿ ಸಾಗುತ್ತಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತವು ನಾಲ್ಕನೇ ಅತಿ ದೊಡ್ಡ ಆರ್ಥಿಕ ದೇಶವಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲಿ 3ನೇ ಸ್ಥಾನಕ್ಕೆ ಏರಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ರಸ್ತೆ ಜಾಲವು ಇಂದು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಜಾಲವಾಗಿ ಹೊರಹೊಮ್ಮಿದೆ. 2024 ರ ಆರಂಭದ ವೇಳೆಗೆ ಭಾರತದಲ್ಲಿನ ಒಟ್ಟು ರಸ್ತೆ ಜಾಲವು ಸುಮಾರು 66.71 ಲಕ್ಷ ಕಿಲೋ ಮೀಟರ್ ವ್ಯಾಪಿಸಿದೆ" ಎಂದರು.
"2014 ರಲ್ಲಿ ಸುಮಾರು 91,287 ಕಿಲೋ ಮೀಟರ್ನಷ್ಟು ಇದ್ದ ರಾಷ್ಟ್ರೀಯ ಹೆದ್ದಾರಿಗಳ ಜಾಲದ ಉದ್ದವು 2024 ರ ಆರಂಭದ ವೇಳೆಗೆ 1,46,000 ಕಿಲೋ ಮೀಟರ್ಗೆ ಗಮನಾರ್ಹವಾಗಿ ಬೆಳೆದಿದೆ, ಇದು ಸರಿಸುಮಾರು ಶೇಕಡಾ 60ರಷ್ಟು ಹೆಚ್ಚಳವಾಗಿದೆ" ಎಂದು ಹೇಳಿದರು.
"ಭಾರತದ ರಸ್ತೆ ಮೂಲಸೌಕರ್ಯ ಕೆಲವೇ ವರ್ಷಗಳಲ್ಲಿ ಅಮೆರಿಕದ ಮಾನದಂಡಗಳಿಗೆ ಹೊಂದಿಕೆಯಾಗುವ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಹೊಂದಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುತ್ತದೆ" ಎಂದು ತಿಳಿಸಿದರು.