ಶಿವಮೊಗ್ಗ, ಡಿ. 11 (DaijiworldNews/AK): ಜಿಲ್ಲೆಯ ಕೇಂದ್ರ ಕಾರಾಗೃಹದೊಳಗೆ ಬಂಧಿತನನ್ನು ನೋಡಲು ಬಂದಿದ್ದ ವ್ಯಕ್ತಿಯೋರ್ವ ಪ್ಯಾಂಟ್ನ ಜೇಬಿನಲ್ಲಿಟ್ಟುಕೊಂಡು ಮಾದಕ ವಸ್ತು ಸಾಗಿಸಲು ಯತ್ನಿಸಿದ ಘಟನೆ ನಡೆದಿದೆ.

ಬಂಧಿತ ವ್ಯಕ್ತಿಯನ್ನು ಶಕೀಬ್ ಎಂದು ಗುರುತಿಸಲಾಗಿದೆ. ಕೈದಿ ಅಶೋಕ್ ಎಂಬಾತನನ್ನು ಭೇಟಿ ಮಾಡಲು ಬಂದಾಗ ಮಾದಕ ವಸ್ತು ಸಾಗಿಸಲು ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಮಂಗಳವಾರ (ಡಿ.9) ಸಂಜೆ ಕೈದಿ ಅಶೋಕ್ನನ್ನು ನೋಡಲು ಶಕೀಬ್ ಮಾರುತಿ ಸುಜುಕಿ ಕಾರಿನಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬಂದಿದ್ದ. ಈ ವೇಳೆ ಕರ್ತವ್ಯ ನಿರತರಾದ ಅಧಿಕಾರಿಗಳು ಸಂದರ್ಶಕ ಶಕೀಬ್ ಮತ್ತು ಬಂಧಿತನಿಗೆ ನೀಡಲು ತಂದಿದ್ದ ಬಟ್ಟೆ ಹಾಗೂ ಇತರೆ ವಸ್ತುಗಳನ್ನು ತಪಾಸಣೆಗೊಳಪಡಿಸಿದರು. ಈ ಸಂದರ್ಭದಲ್ಲಿ ಆತ ತಂದಿದ್ದ ನಾಲ್ಕು ಜೀನ್ಸ್ ಪ್ಯಾಂಟ್ಗಳ ಸೊಂಟದ ಪಟ್ಟಿಯ ಒಳಗಡೆ ಹಾಗೂ ಜಿಪ್ ಪಟ್ಟಿಯಲ್ಲಿ ಗಾಂಜಾ ಪತ್ತೆಯಾಗಿದೆ.
ಗಾಂಜಾ ಪತ್ತೆಯಾದ ನಂತರ ಶಕೀಬ್ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಆತನ ಬಳಿ 9,910 ರೂ. ನಗದು ಹಣ ಪತ್ತೆಯಾಗಿದೆ. ನಂತರ ಭದ್ರತಾ ಸಿಬ್ಬಂದಿ ಗಾಂಜಾ, ನಗದು ಹಾಗೂ ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಂಡಿದ್ದಾರೆ.