ಬೆಂಗಳೂರು, ಡಿ. 11 (DaijiworldNews/TA): ಮೈಕ್ರೋಸಾಫ್ಟ್ ಟೆಕ್ನಿಕಲ್ ಸಪೋರ್ಟ್ ಸಿಬ್ಬಂದಿಯ ಹೆಸರಿನಲ್ಲಿ ವಿದೇಶೀ ಪ್ರಜೆಗಳಿಂದ ಕೋಟ್ಯಂತರ ರೂಪಾಯಿ ದೋಚುತ್ತಿದ್ದ ಬೆಂಗಳೂರಿನ ಸೈಬರ್ ವಂಚಕರ ಗ್ಯಾಂಗ್ನ್ನು ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಮೆರಿಕಾ ಮತ್ತು ಬ್ರಿಟನ್ನ ಕನಿಷ್ಠ 150 ಮಂದಿ ವಂಚನೆಗೆ ಒಳಗಾಗಿದ್ದು, ಪ್ರತಿಯೊಬ್ಬರಿಂದ ಲಕ್ಷಾಂತರ ರೂಪಾಯಿಗಳಷ್ಟು ಹಣ ವಂಚಿಸಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆಗಸ್ಟ್ ತಿಂಗಳಿನಿಂದ ಈ ಗ್ಯಾಂಗ್ ಸಂಪರ್ಕಿಸಿದವರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಒಟ್ಟು 13.5 ಕೋಟಿಗೂ ಹೆಚ್ಚು ಹಣ ವಂಚಿಸಲಾಗಿರುವ ಶಂಕೆ ವ್ಯಕ್ತವಾಗಿದೆ.

ಕಳೆದ ತಿಂಗಳು ಪೊಲೀಸರು ವೈಟ್ಫೀಲ್ಡ್ನಲ್ಲಿರುವ ‘ಮಸ್ಕ್ ಕಮ್ಯುನಿಕೇಷನ್ಸ್’ ಕಚೇರಿಗೆ ದಾಳಿ ನಡೆಸಿ 21 ಮಂದಿ ಶಂಕಿತರನ್ನು ಬಂಧಿಸಿದ್ದರು. ಈ ಕಚೇರಿಯಿಂದ ಮೈಕ್ರೋಸಾಫ್ಟ್ ಸಪೋರ್ಟ್ ತಂಡದ ನಕಲಿ ಪ್ರತಿನಿಧಿಗಳಂತೆ ನಟನೆ ಮಾಡುತ್ತಾ, ವಿದೇಶೀ ಪ್ರಜೆಗಳಿಗೆ ‘ಫೆಡರಲ್ ಟ್ರೇಡ್ ಕಮಿಷನ್ ಉಲ್ಲಂಘನೆ’ ಎಂಬ ನಕಲಿ ಎಚ್ಚರಿಕೆ ತೋರಿಸಿ ಹಣ ವಸೂಲಿ ಮಾಡಲಾಗುತ್ತಿತ್ತು. ತನಿಖೆ ಮುಂದುವರಿದಂತೆ ಈ ವಂಚನೆ ಕಾರ್ಯಾಚರಣೆಯ ಮೂಲ ವ್ಯಕ್ತಿ ಅಹಮದಾಬಾದ್ನ ರವಿ ಚೌಹಾಣ್ ಎಂಬಾತ ಎಂದು ಪತ್ತೆಯಾಗಿದ್ದು, ಪೊಲೀಸರು ಅವನನ್ನೂ ವಶಕ್ಕೆ ಪಡೆದಿದ್ದಾರೆ. ಚೌಹಾಣ್ ಬೆಂಗಳೂರಿನಲ್ಲಿ ನಕಲಿ ಟೆಕ್-ಸಪೋರ್ಟ್ ಸೆಂಟರ್ ನಡೆಸುತ್ತಿದ್ದು, ಸುಮಾರು 85 ಮಂದಿ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾನೆ ಎಂಬುದು ಪತ್ತೆಯಾಗಿದೆ. ಅವನ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.
ಆರೋಪಿಗಳು ವಂಚಿತರಿಗೆ “ನಿಮ್ಮ ವ್ಯವಸ್ಥೆಯಲ್ಲಿ ಗಂಭೀರ ಉಲ್ಲಂಘನೆ ಸಂಭವಿಸಿದೆ” ಎಂದು ಹೇಳಿ, ಸಮಸ್ಯೆ ನಿವಾರಣೆಗೆ ತುರ್ತು ಕ್ರಮವಾಗಿ ಬಿಟ್ಕಾಯಿನ್ ಎಟಿಎಂಗಳಲ್ಲಿ ಹಣ ಠೇವಣಿ ಮಾಡಲು ಒತ್ತಡ ಹೇರುತ್ತಿದ್ದರೆಂದು ಹಿರಿಯ ಐಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕಾ ಮತ್ತು ಬ್ರಿಟನ್ನ ಅನೇಕ ಸಂತ್ರಸ್ತರು ಸುಮಾರು 10,000 ಡಾಲರ್ವರೆಗೂ ವಿವಿಧ ಬಿಟ್ಕಾಯಿನ್ ಎಟಿಎಂಗಳಲ್ಲಿ ಠೇವಣಿ ಇಟ್ಟಿದ್ದು ಈಗ ಬಹಿರಂಗವಾಗಿದೆ. ಸಂತ್ರಸ್ತರ ಬ್ಯಾಂಕ್ ವಿವರಗಳನ್ನು ಪಡೆದುಕೊಳ್ಳಲು ಕೂಡ ಆರೋಪಿಗಳು ಯತ್ನಿಸುತ್ತಿದ್ದರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 14 ಮತ್ತು 15 ರಂದು ಸೈಬರ್ ಕಮಾಂಡ್ ವಿಶೇಷ ಘಟಕ ಮತ್ತು ವೈಟ್ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯ ತಂಡಗಳು ವೈಟ್ಫೀಲ್ಡ್ನ ಸಿಗ್ಮಾ ಸಾಫ್ಟ್ ಟೆಕ್ ಪಾರ್ಕ್ನ ಡೆಲ್ಟಾ ಕಟ್ಟಡದಲ್ಲಿದ್ದ ಮಸ್ಕ್ ಕಮ್ಯುನಿಕೇಷನ್ಸ್ ಕಚೇರಿಗೆ ಎರಡು ದಿನಗಳ ಕಾಲ ದಾಳಿ ನಡೆಸಿದರು. ದಳವು ವಂಚನೆಗೆ ಬಳಸಲಾಗಿದ್ದ ಕಂಪ್ಯೂಟರ್ಗಳು, ಲ್ಯಾಪ್ಟಾಪ್ಗಳು, ಹಾರ್ಡ್ ಡಿಸ್ಕ್ಗಳು, ಮೊಬೈಲ್ಗಳು ಸೇರಿದಂತೆ ಅನೇಕ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಿದೆ. ಬಂಧಿತರನ್ನು ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.