ತುಮಕೂರು,ನ. 18 (DaijiworldNews/AK): ಸೆಪ್ಟೆಂಬರ್ , ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ ಎಂದರು. ನಮ್ಮ ಗೃಹಲಕ್ಷ್ಮಿಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ನ.28ಕ್ಕೆ ನಾವು ಅಂಗನವಾಡಿ ಆರಂಭಿಸಿ 50 ವರ್ಷ ಆಯಿತು. ಕರ್ನಾಟಕದಿಂದಲೇ ಅಂಗನವಾಡಿ ಶುರುವಾಗಿದ್ದು. 1975ರಲ್ಲಿ ಇಂದಿರಾಗಾಂಧಿ ಅವರು ಮೈಸೂರಿನ ಟಿ.ನರಸೀಪುರದಲ್ಲಿ ಪ್ರಾರಂಭ ಮಾಡಿದರು. ಐವತ್ತು ವರ್ಷದ ಹಿನ್ನೆಲೆ ಸುವರ್ಣ ಮಹೋತ್ಸವ ಆಚರಿಸುತ್ತಿದ್ದೇವೆ. ಇಲಾಖೆಯಿಂದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಅದಕ್ಕಾಗಿ 10 ಜಿಲ್ಲೆಗಳಲ್ಲಿ ಪೂರ್ವಭಾವಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದು ಕೇವಲ ಸಂಭ್ರಮವಲ್ಲ ಇಂದಿರಾಗಾಂಧಿ ಅವರ ಕನಸನ್ನು ಯಾವ ರೀತಿ ತೆಗೆದುಕೊಂಡು ಹೋಗಬೇಕು ಎಂಬುದನ್ನು ಘೋಷಣೆ ಮಾಡುತ್ತೇವೆ ಎಂದರು.
ಇದೇ ವೇಳೆ ಅಕ್ಕಪಡೆ ಬಗ್ಗೆ ಮಾತನಾಡಿ, ಪೊಲೀಸ್ ಇಲಾಖೆ ಮತ್ತು ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅಕ್ಕಪಡೆ ಕಾರ್ಯನಿರ್ವಹಿಸುತ್ತದೆ. ಪ್ರತಿ ಜಿಲ್ಲೆಯಲ್ಲೂ, ಅದರಲ್ಲೂ ನಗರ ಕೇಂದ್ರಗಳಲ್ಲಿ 10 ಮಹಿಳೆಯರು ಇರುತ್ತಾರೆ. ಅವರ ಜೊತೆಗೆ ಇಬ್ಬರು ಮಹಿಳಾ ಪೊಲೀಸರು ಇರುತ್ತಾರೆ. ಅದರಲ್ಲಿ ಎನ್ಸಿಸಿ, ಹೋಮ್ ಗಾರ್ಡ್ಗಳು ಕೂಡ ಇರುತ್ತಾರೆ. ಅವರಿಗೊಂದು ವಾಹನ, ಅದಕ್ಕೊಬ್ಬ ಚಾಲಕ ಇರುತ್ತಾರೆ. ಶಾಲೆ, ಕಾಲೇಜುಗಳು, ಬಸ್ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶ, ಮಹಿಳಾ ಹಾಸ್ಟೆಲ್ಗಳು, ಪಾರ್ಕ್, ದೇವಸ್ಥಾನ, ಮನೆ, ಜನವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.