ಲಕ್ನೋ, ಅ. 21 (DaijiworldNews/AK): ದೀಪಾವಳಿ ಹಬ್ಬಕ್ಕೆ ಬೋನಸ್ ಕೊಟ್ಟಿಲ್ಲ ಎಂದು ಟೋಲ್ ಸಂಗ್ರಹಿಸದೇ ವಾಹನಗಳನ್ನು ಫ್ರೀ ಬಿಟ್ಟು ಟೋಲ್ ಸಿಬ್ಬಂದಿ ಮುಷ್ಕರ ನಡೆಸಿದ ಘಟನೆ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ವೇನಲ್ಲಿ ನಡೆದಿದೆ.

ಇದರಿಂದ ಸಾವಿರಾರು ವಾಹನಗಳು ಟೋಲ್ ಪಾವತಿಸದೇ ಹೋಗಿದ್ದು, ನಿರ್ವಹಿಸುವ ಸಂಸ್ಥೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ದೀಪಾವಳಿ ಪ್ರಯುಕ್ತ ಬೋನಸ್ ನಿರಾಕರಿಸಿದ ಹಿನ್ನೆಲೆ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ವೇ ಟೋಲ್ ನಿರ್ವಾಹಕರು ಎಲ್ಲಾ ವಾಹನಗಳನ್ನ ಫ್ರೀ ಬಿಟ್ಟಿದ್ದಾರೆ. ಟೋಲ್ ಪಾವತಿಸದೇ ವಾಹನಗಳು ಹೊರಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಎಕ್ಸ್ಪ್ರೆಸ್ ವೇ ಆಗ್ರಾ ಮತ್ತು ಲಕ್ನೋ ನಡುವೆ ನೇರ ಸಂಪರ್ಕ ಕಲ್ಪಿಸುತ್ತದೆ. ಜೊತೆಗೆ ಯಮುನಾ ಎಕ್ಸ್ಪ್ರೆಸ್ವೇ ಮೂಲಕ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೂ ಸಂಪರ್ಕ ಕಲ್ಪಿಸುತ್ತದೆ.
ಕಳೆದ ಒಂದು ವರ್ಷದಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಆದ್ರೆ ಅವರು ಹಬ್ಬಕ್ಕೆ ಯಾವುದೇ ಬೋನಸ್ ಕೊಟ್ಟಿಲ್ಲ. ತುಂಬಾ ಕಷ್ಟಪಟ್ಟಿ ಕೆಲಸ ಮಾಡ್ತಿದ್ದೇವೆ. ಮೊದಲೇ ವೇತನವನ್ನ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಈಗ ಬೋನಸ್ ಕೇಳಿದ್ರೆ ನಮ್ಮನ್ನೇ ಕೆಲಸರಿಂದ ತೆಗೆಯುವುದಾಗಿ ಹೆದರಿಸುತ್ತಿದ್ದಾರೆ ಎಂದು ಪ್ರತಿಭಟನಾ ನಿರತ ಟೋಲ್ ಸಿಬ್ಬಂದಿಯೊಬ್ಬರು ಹೇಳಿಕೊಂಡಿದ್ದಾರೆ.