ಬೆಂಗಳೂರು, ಅ. 21 (DaijiworldNews/AA): ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ ಮಾಡುವ ಮೂಲಕ ಕೆಎಂಎಫ್ನ ನಂದಿನಿ ಬ್ರ್ಯಾಂಡ್ ಹೊಸ ದಾಖಲೆ ನಿರ್ಮಿಸಿದೆ ಎಂದು ಸಚಿವ ಕೆ.ವೆಂಕಟೇಶ್ ಮಾಹಿತಿ ನೀಡಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, "ಪ್ರತಿ ವರ್ಷ ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಸಿಹಿತಿನಿಸುಗಳಿಗೆ ರಾಜ್ಯದಾದ್ಯಂತ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಈ ಹಬ್ಬದ ಅವಧಿಯಲ್ಲಿ ನಂದಿನಿ ಬ್ರಾಂಡ್ನಡಿಯಲ್ಲಿ ಲಭ್ಯವಿರುವ 40ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್ ಮುಂಚಿತ ಸಿದ್ಧತೆ ಕೈಗೊಂಡಿತ್ತು. 2025ರ ಹಬ್ಬದ ಅವಧಿಗೆ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗಿದಪಡಿಸಲಾಯಿತು. ಸದರಿ ಗುರಿಯನ್ನು ಮೀರಿ ಈ ವರ್ಷ ಕೆಎಂಎಫ್ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ 46.00 ಕೋಟಿ ರೂ.ಗಳ ದಾಖಲೆಯ ವಹಿವಾಟು ಸಾಧಿಸುವ ಮೂಲಕ ಒಂದು ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ. ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ.38ರಷ್ಟು ವಹಿವಾಟು ಪ್ರಗತಿಯಾಗಿದ್ದು, ಇದು ಕೆ.ಎಂ.ಎಫ್ ಇತಿಹಾಸದಲ್ಲಿಯೇ ಸರ್ವಕಾಲಿಕ ದಾಖಲೆಯಾಗಿದೆ" ಎಂದು ತಿಳಿಸಿದರು.
"ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ಸಂಸ್ಥೆಯು ಕಳೆದ ಐದು ದಶಕಗಳಿಂದ ರಾಜ್ಯದ ಹೈನುಗಾರಿಕೆ ಮತ್ತು ಸಹಕಾರ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪ್ರತಿದಿನ ರಾಜ್ಯದ ವಿವಿಧ ಹೈನುಗಾರ ರೈತರಿಂದ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ ಸುಮಾರು 65 ಲಕ್ಷ ಲೀಟರ್ ಹಾಲು, ಮೊಸರು ಹಾಗೂ ಯುಎಚ್ ಹಾಲು ಉತ್ಪನ್ನಗಳನ್ನು ರಾಜ್ಯ ಮತ್ತು ಹೊರರಾಜ್ಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ" ಎಂದು ಹೇಳಿದರು.
"ನಂದಿನಿ ಬ್ರ್ಯಾಂಡ್ನಡಿಯಲ್ಲಿ ಹಾಲಿನೊಂದಿಗೆ ತುಪ್ಪ ಬೆಣ್ಣೆ, ಪನೀರ್, ಸಿಹಿ ತಿನಿಸುಗಳು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 175ಕ್ಕೂ ಅಧಿಕ ಬಗೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಾಜ್ಯ ನೆರೆರಾಜ್ಯಗಳು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ದೆಹಲಿ, ಅಸ್ಸಾಂ ಮತ್ತು ಕೆಲ ಹೊರದೇಶಗಳ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟ ಮಾಡಲಾಗುತ್ತಿದೆ. ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ಧತೆ, ಗುಣಮಟ್ಟ ಮತ್ತು ಕೈಗೆಟುಕುವ ಬೆಲೆಯು ನಂದಿನಿ ಬ್ರ್ಯಾಂಡ್ ಅನ್ನು ಗ್ರಾಹಕರ ವಿಶ್ವಾಸದ ಪ್ರತೀಕವನ್ನಾಗಿ ಮಾಡಿದೆ" ಎಂದರು.