ನವದೆಹಲಿ, ಅ. 21 (DaijiworldNews/TA): “ಆರ್ಎಸ್ಎಸ್ ಏಳಿಗೆಯನ್ನು ಕೆಲವರು ಸಹಿಸುತ್ತಿಲ್ಲ. ಆದರೆ ಸೂರ್ಯ ಮತ್ತು ಚಂದ್ರ ಇರುವ ತನಕ ಆರ್ಎಸ್ಎಸ್ ಇರುತ್ತದೆ. ನಾಟಕ ಬಿಟ್ಟು ರಾಜ್ಯದ ಅಭಿವೃದ್ಧಿಯ ಕಡೆ ಗಮನಹರಿಸಲು ಕಾಂಗ್ರೆಸ್ ನಾಯಕರು ಮುಂದಾಗಬೇಕು,” ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಚಿವ ವಿ. ಸೋಮಣ್ಣ ಅವರು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿ, ಜಿಎಸ್ಟಿ ಕಡಿತದಿಂದ ಜನರಿಗೆ ದೊರೆಯುತ್ತಿರುವ ಪ್ರಯೋಜನಗಳ ಕುರಿತು ಸಂತೋಷ ವ್ಯಕ್ತಪಡಿಸಿದರು. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು 299 ಪದಾರ್ಥಗಳ ಮೇಲೆ ಜಿಎಸ್ಟಿ ಕಡಿತ ಮಾಡುವ ಮೂಲಕ ಜನಸಾಮಾನ್ಯರಿಗೆ ದೀಪಾವಳಿಯ ಸಿಹಿ ಸುದ್ದಿ ನೀಡಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಜೆಗೆ ನೀಡಲಾದ ನಿಜವಾದ ದೀಪಾವಳಿ ಉಡುಗೊರೆ ಎಂಬುವುದಾಗಿ ಹೇಳಿದರು.
ರಾಜ್ಯ ರಾಜಕಾರಣದ ಕುರಿತು ಮಾತನಾಡಿದ ವಿ. ಸೋಮಣ್ಣ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡರು. “ಸಿದ್ದರಾಮಯ್ಯ ಸರ್ಕಾರಕ್ಕೆ ತಾವು ಏನು ಮಾಡುತ್ತಿದ್ದಾರೆ ಎಂಬ ಅರಿವೇ ಇಲ್ಲ. ಸಿಎಂ ಹಾಗೂ ಡಿಸಿಎಂ ಇಬ್ಬರೂ ಬೆಳಿಗ್ಗೆ ಎದ್ದು ನಾಟಕ ಮಾಡುವುದರಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆಗಳ ಕಡೆ ಗಮನ ಕೊಡಬೇಕಾದ ಸಮಯದಲ್ಲಿ ರಾಜಕೀಯ ಪ್ರದರ್ಶನದಲ್ಲಿ ಮುಳುಗಿದ್ದಾರೆ,” ಎಂದು ಅವರು ವಾಗ್ದಾಳಿ ನಡೆಸಿದರು.
ಸೋಮಣ್ಣ ಅವರು ತಮ್ಮ ಹಿಂದಿನ ಆಡಳಿತಾವಧಿಯನ್ನು ಉಲ್ಲೇಖಿಸಿ, ಎ-ಖಾತಾ, ಬಿ-ಖಾತಾ ಸಮಸ್ಯೆಗಳಿಗೆ ಪರಿಹಾರ ನಮ್ಮ ಕಾಲದಲ್ಲೇ ಮಾಡಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ನಾವು ದಾರಿ ತೋರಿಸಿದ್ದೇವೆ. ಈಗಿನ ಕಾಂಗ್ರೆಸ್ ಸರ್ಕಾರವು ಜನರನ್ನು ಸುಲಿಗೆ ಮಾಡುವ ಕ್ರಮಗಳನ್ನು ಮಾತ್ರ ಕೈಗೊಂಡಿದೆ,” ಎಂದು ಆರೋಪಿಸಿದರು. ಬೆಂಗಳೂರಿನ ಜನರಿಂದ ಕಾಂಗ್ರೆಸ್ ಸರ್ಕಾರ ಕೈಗೊಳ್ಳುತ್ತಿರುವ ಸುಲಿಗೆ ಕ್ರಮಗಳ ಕುರಿತು ಶೀಘ್ರದಲ್ಲೇ ಒಂದು ಸಂಪೂರ್ಣ ಪುಸ್ತಕವನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಘೋಷಿಸಿದರು.
ತಮ್ಮ ಪಕ್ಷದ ಹೋರಾಟದ ನಿಲುವಿನ ಬಗ್ಗೆ ಮಾತನಾಡಿ, “ರಾಜ್ಯದಲ್ಲಿ ವಿಪಕ್ಷಗಳ ಹೋರಾಟ ನಡೆಯುತ್ತಿದೆ. ನಾನು ಹಿರಿಯ ನಾಯಕರ ಮಾರ್ಗದರ್ಶನದಂತೆ ಕೆಲಸ ಮುಂದುವರಿಸುತ್ತಿದ್ದೇನೆ,” ಎಂದರು. ಅವರು ಕೊನೆಯಲ್ಲಿ, “ಜನರ ಸಮಸ್ಯೆಗಳ ಪರಿಹಾರ, ರಾಜ್ಯದ ಅಭಿವೃದ್ಧಿ ಮತ್ತು ನೈತಿಕ ರಾಜಕಾರಣವೇ ನಮ್ಮ ಆದ್ಯತೆ,” ಎಂದು ಹೇಳಿದರು.