ನವದೆಹಲಿ, ಅ. 20 (DaijiworldNews/AK):ದೀಪಾವಳಿ ಹಬ್ಬದ ವೇಳೆ ಕಡಿಮೆ ಹೊಗೆ ಸೂಸುವ ಪಟಾಕಿಗಳನ್ನು ಸಿಡಿಸುವ ಮೂಲಕ, ರಾಸಾಯನಿಕ ಮುಕ್ತವಾದ ರೀತಿಯಲ್ಲಿ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಆಚರಿಸಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಆದರೆ, ಕಡಿಮೆ ಹೊಗೆ ಉತ್ಪಾದಿಸುವ ಹರಳೆಣ್ಣೆಯಿಂದ ಹಣತೆಯನ್ನು ಬೆಳಗಿಸುವ ಬಗ್ಗೆ ಜನರಿಗೆ ಇಶಾ ಫೌಂಡೇಷನ್ನ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಸಲಹೆ ನೀಡಿದ್ದಾರೆ.ದೀಪಾವಳಿ ಎಂದರೆ ಕೇವಲ ಮನೆಗಳ ಮುಂದೆ ದೀಪಗಳನ್ನು ಬೆಳಗಿಸುವುದಲ್ಲ, ನಮ್ಮೊಳಗಿನ ಕತ್ತಲೆಯನ್ನು ಹೋಗಲಾಡಿಸಿ ನಮ್ಮ ಮನಸ್ಸನ್ನು ಬೆಳಕಿನಿಂದ ತುಂಬುವುದಾಗಿದೆ. ಈ ಬಾರಿ ದೀಪಾವಳಿಗೆ ಹರಳೆಣ್ಣೆಯ ದೀಪಗಳನ್ನು ಬೆಳಗಿಸುವ ಮೂಲಕ ಹಸಿರು ದೀಪಾವಳಿಯನ್ನು ಆಚರಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಹರಳೆಣ್ಣೆ ಬಳಸುವುದರಿಂದ ಹೊಗೆ ಕಡಿಮೆಯಾಗಿ ಬೆಳಕು ಹೆಚ್ಚು ಇರುತ್ತದೆ ಎಂದು ಅವರು ಹೇಳಿದ್ದಾರೆ.
ಇಡೀ ಜಗತ್ತು ದೀಪಾವಳಿ ಆಚರಣೆಯಲ್ಲಿ ಮುಳುಗಿರುವ ಈ ಸಮಯದಲ್ಲಿ, ಸದ್ಗುರುಗಳು ಒಳ್ಳೆಯ ಸಂದೇಶವೊಂದನ್ನು ನೀಡಿದ್ದಾರೆ. ಈ ಹಬ್ಬದ ನಿಜವಾದ ಅರ್ಥ ಕೇವಲ ಮನೆಗಳ ಮುಂದೆ ದೀಪಗಳನ್ನು ಬೆಳಗಿಸುವುದಲ್ಲ. ನಮ್ಮ ಮನಸ್ಸಿನಲ್ಲಿರುವ ಕತ್ತಲೆಯನ್ನು ಓಡಿಸಿ ನಮ್ಮೊಳಗಿನ ಬೆಳಕನ್ನು ಬೆಳಗಲು ಬಿಡಬೇಕು ಎಂದು ಅವರು ನಮಗೆ ನೆನಪಿಸಿದ್ದಾರೆ.
“ಕತ್ತಲೆಯನ್ನು ಹೋಗಲಾಡಿಸುವುದು ಬೆಳಕಿನ ಸ್ವಭಾವ. ನಿಮ್ಮೊಳಗಿನ ಬೆಳಕು ಬೆಳೆದು ನೀವು ಸ್ಪರ್ಶಿಸುವ ಪ್ರತಿಯೊಬ್ಬರಿಗೂ ಆ ಬೆಳಕು ಹರಡಲಿ ಎಂದು ನಾನು ಬಯಸುತ್ತೇನೆ” ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.