ಪಣಜಿ, ಅ. 20 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಗೋವಾ ಕರಾವಳಿಯಲ್ಲಿ ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಆಚರಿಸಿದರು. ಗೋವಾದ ಕಾರವಾರ ಕರಾವಳಿಯಲ್ಲಿರುವ ಐಎನ್ಎಸ್ ವಿಕ್ರಾಂತ್ಗೆ ಭೇಟಿ ನೀಡಿದ ಅವರು ನೌಕಾಪಡೆ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದರು.

ಈ ವೇಳೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಐಎನ್ಎಸ್ ವಿಕ್ರಾಂತ್ ಹಾಗೂ ಬ್ರಹ್ಮೋಸ್ ಆಕಾಶ್ ಕ್ಷಿಪಣಿಗಳ ಸಾಮರ್ಥ್ಯವನ್ನು ಕೊಂಡಾಡಿದರು. ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನದಲ್ಲಿ ಭಯವನ್ನುಂಟು ಮಾಡಿತು, ಅದು ಅವರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿತು ಎಂದು ಹೇಳಿದ್ದಾರೆ.
ಐಎನ್ಎಸ್ ವಿಕ್ರಾಂತ್ ಹೆಸರೇ ಪಾಕಿಸ್ತಾನದ ನಿದ್ರೆಯನ್ನು ಕಸಿದುಕೊಂಡಿತು. ಅದರ ಹೆಸರೇ ಶತ್ರುಗಳ ಧೈರ್ಯವನ್ನು ಅಲುಗಾಡಿಸಬಹುದಾದರೆ ಅದರ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಿ. ಯುದ್ಧನೌಕೆ ಭಾರತದ ಕಡಲ ಶಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿದೆ ಎಂದರು.
ಇಂದು ಅದ್ಭುತ ದಿನ, ಈ ದೃಶ್ಯ ಅವಿಸ್ಮರಣೀಯ. ಈ ದಿನ ನನ್ನ ಬಳಿ ಒಂದು ಕಡೆ ಸಾಗರವಿದೆ, ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಬಲವಿದೆ. ಇನ್ನೊಂದೆಡೆ ಅನಂತ ದಿಗಂತ, ಅನಂತ ಆಕಾಶ ಹಾಗೂ ಅನಂತ ಶಕ್ತಿಯ ಸಂಕೇತವಾದ ಐಎನ್ಎಸ್ ವಿಕ್ರಾಂತ್ ಇದೆ. ಸಾಗರ ನೀರಿನ ಮೇಲೆ ಹೊಳೆಯುವ ಸೂರ್ಯನ ಕಿರಣಗಳು ವೀರ ಸೈನಿಕರು ಬೆಳಗಿದ ದೀಪಾವಳಿ ದೀಪಗಳಂತೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ನೌಕಾಪಡೆಯ ಎಲ್ಲಾ ವೀರ ಸೈನಿಕರೊಂದಿಗೆ ಪವಿತ್ರ ಹಬ್ಬ ದೀಪಾವಳಿ ಆಚರಿಸುತ್ತಿರುವುದು ನನ್ನ ಅದೃಷ್ಟ. ಐಎನ್ಎಸ್ ವಿಕ್ರಾಂತ್ ಸ್ವಾವಲಂಬಿ ಭಾರತದ ಸಂಕೇತ, ನಾನು ನಮ್ಮ ಸಶಸ್ತ್ರ ಪಡೆಗಳಿಗೆ ವಿಶೇಷವಾಗಿ ವಂದನೆಗಳನ್ನು ಸಲ್ಲಿಸುತ್ತೇನೆ. ಏಕೆಂದ್ರೆ ಈ ಮೂರು ಪಡೆಗಳ ಪ್ರಚಂಡ ಸಮನ್ವಯವು ಪಾಕಿಸ್ತಾನವನ್ನು ಆಪರೇಷನ್ ಸಿಂಧೂರದಲ್ಲಿ ಶರಣಾಗುವಂತೆ ಮಾಡಿತು. ಬ್ರಹ್ಮೋಸ್ ಆಕಾಶ್ ನಂತರ ಕ್ಷಿಪಣಿಗಳು ಆಪರೇಷನ್ ಸಿಂಧೂರದಲ್ಲಿ ತಮ್ಮ ಸಾಮರ್ಥ್ಯವನ್ನ ಸಾಬೀತುಪಡಿಸಿವೆ. ಹೀಗಾಗಿ ಇಂದು ಪ್ರಪಂಚದಾದ್ಯಂತ ಹಲವಾರು ದೇಶಗಳು ಈಗ ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ಆಸಕ್ತಿ ತೋರಿವೆ ಎಂದು ಮೋದಿ ಹೇಳಿದರು.