ಬೆಂಗಳೂರು, ಅ. 20 (DaijiworldNews/AK):ಪ್ರಸಿದ್ಧ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಓಲಾ ಸಿಬ್ಬಂದಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಓ ಭವಿಶ್ ಅಗರ್ವಾಲ್ , ಓಲಾ ಸಂಸ್ಥೆ ಮತ್ತು ಎಂಜಿನಿಯರ್ ಮೇಲೆ ಎಫ್ಐಆರ್ ದಾಖಲಾಗಿದೆ.

ಕಂಪನಿಯ ಹೋಮೋಲೋಗೇಷನ್ ವಿಭಾಗದ ಅರವಿಂದ್ ಕೆ(38) ಅವರು ಚಿಕ್ಕಲಸಂದ್ರದಲ್ಲಿರುವ ಮಂಜುನಾಥನಗರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸೆ.28 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಂಡ ಎರಡು ದಿನದ ಬಳಿಕ ಅರವಿಂದ್ ಅಕೌಂಟ್ಗೆ 17.46 ಲಕ್ಷ ರೂ. ಹಣ ಜಮೆಯಾಗಿತ್ತು.
ಹಣ ಜಮೆಯಾದ ಬಗ್ಗೆ ಅನುಮಾನದಿಂದ ಕಂಪನಿಯವರನ್ನ ಕುಟುಂಬಸ್ಥರು ಪ್ರಶ್ನಿಸಿದ್ದರು. ಆದರೆ ಕಂಪನಿಯಿಂದ ಸರಿಯಾದ ಸ್ಪಷ್ಟನೆ ಸಿಕ್ಕಿರಲಿಲ್ಲ. ಹೀಗಾಗಿ ಅನುಮಾನ ಹೆಚ್ಚಾದ ನಂತರ ಮನೆಯನ್ನು ಪರಿಶೀಲಿಸಿದಾಗ 28 ಪುಟಗಳ ಡೆತ್ ನೋಟ್ ಪತ್ತೆಯಾಗಿತ್ತು. ಡೆತ್ ನೋಟ್ ಆಧಾರದ ಮೇಲೆ ಅರವಿಂದ್ ಅವರ ಸಹೋದರ ಅಶ್ವಿನ್ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಸುಬ್ರತ್ ಕುಮಾರ್ ದಾಸ್(ಎ1),ಭವೀಶ್ ಅಗರ್ವಾಲ್ (ಎ2),ಓಲಾ ಎಲೆಕ್ಟ್ರಿಕ್ ಕಂಪನಿ(ಎ3) ಆರೋಪಿಗಳನ್ನಾಗಿ ಮಾಡಲಾಗಿದೆ.