ಬೆಂಗಳೂರು, ಅ. 11 (DaijiworldNews/AA): ಕೇಂದ್ರ ಸರ್ಕಾರದಿಂದ ಹತ್ತು ರೂಪಾಯಿ ಹಣ ತನ್ನಿ. ಸ್ಟೀಲ್ ಫ್ಲೈಓವರ್ ಬೇಡ ಎಂದು ರಾಜೀವ್ ಚಂದ್ರಶೇಖರ್ ಅಭಿಯಾನ ಮಾಡಿದ್ರು. ಈಗ ಕರ್ನಾಟಕದಿಂದ ಓಡಿ ಹೋಗಿದ್ದಾರೆ. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ. ದೇಶಾದ್ಯಂತ ಜನ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬರ್ತಿದ್ದಾರೆ. ಪುಣೆ, ಮುಂಬೈನಲ್ಲಿ ಸಮಸ್ಯೆಗಳು ಇಲ್ವಾ? ಲೇವಡಿ ಏಕೆ ಮಾಡ್ತಿರಾ" ಎಂದು ಪ್ರಶ್ನಿಸಿದ್ದಾರೆ.
"32 ಕಿಲೋ ಮೀಟರ್ ಡಬಲ್ ಡೆಕ್ಕರ್ ಮಾಡ್ತಿದ್ದೇವೆ. ಇದೆಲ್ಲವನ್ನ ಮಾಡ್ತಿರೋದು ಟ್ರಾಫಿಕ್ ಕಂಟ್ರೋಲ್ಗೆ ಅಲ್ವಾ? ವಾಹನ ದಟ್ಟಣೆ ಟ್ರಾಫಿಕ್ ಎಲ್ಲವೂ ಬೆಂಗಳೂರು ಪ್ರಗತಿಯ ಜೊತೆ ಇರುತ್ತೆ ಅಲ್ವಾ? ಸಮಸ್ಯೆ ಇರೋದನ್ನ ಇದೆ ಅನ್ನೋದು ತಪ್ಪಾ. ಪರಿಹರಿಸೋದು ತಪ್ಪಾ? ಬಾಂಬೆ, ಡೆಲ್ಲಿ, ಚೆನ್ನೈ, ಪುಣೆಯಲ್ಲಿ ಏನೂ ಸಮಸ್ಯೆ ಇಲ್ಲವಾ? ಸಮಸ್ಯೆ ಗುರುತಿಸಿ ಪರಿಹಾರ ಕೊಡಬೇಕು ಅಲ್ವಾ" ಎಂದು ಕಿಡಿಕಾರಿದ್ದಾರೆ.
ಶಾಸಕ ವೀರೇಂದ್ರ ಪಪ್ಪಿಯಿಂದ ಬಿಹಾರ ಎಲೆಕ್ಷನ್ಗೆ ಹಣ ಕಲೆಕ್ಷನ್ ನಡೆಯುತ್ತಿತ್ತು ಎಂಬ ಬಿಜೆಪಿ-ಜೆಡಿಎಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, "ಅಶೋಕ್ 100 ಕೋಟಿ ಕೊಟ್ಟಿದ್ದಾರೆ. ಇದನ್ನ ನೀವು ಹಾಕ್ತೀರಾ? ವಿಜಯೇಂದ್ರ ದುಬೈಗೆ ಹೋಗಿ ಬರ್ತಾರೆ. ವಿಜಯೇಂದ್ರ, ಅಮಿತ್ ಶಾಗೆ ಬಿಟ್ಕಾಯಿನ್ ಕೊಟ್ಟಿದ್ದಾರೆ ಅಂದ್ರೆ ನೀವು ನಂಬುತ್ತೀರಾ? ಸಿಎಂ ಆಗಿ ಬರಬೇಕು ಅಂದ್ರೆ ಸುಮ್ಮನೇನಾ? ಕಪ್ಪ ಕೊಡಬೇಕು ಅಂತ ಯಡಿಯೂರಪ್ಪ ಅನಂತ್ ಕುಮಾರ್ ಕಿವಿಯಲ್ಲಿ ಹೇಳಿಲ್ವಾ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.