ಬೆಂಗಳೂರು, ಅ. 09(DaijiworldNews/ TA): ಕೇವಲ ಆರೋಗ್ಯಪೂರಿತ ಬದುಕು ಮಾತ್ರವಲ್ಲ, ಗೌರವಯುತ ಕೆಲಸದ ಪರಿಸರವನ್ನು ನಿರ್ಮಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಪ್ರತಿ ತಿಂಗಳು ವೇತನ ಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಹೆಚ್.ಕೆ. ಪಾಟೀಲ್, ಈ ಮಹತ್ವದ ನಿರ್ಧಾರವನ್ನು ತಿಳಿಸಿದರು. ಮಹಿಳೆಯರ ಋತು ಚಕ್ರದ ಸಮಯದಲ್ಲಿ ಸ್ವಾಸ್ಥ್ಯ ಹಾಗೂ ಮಾನಸಿಕ ನೆಮ್ಮದಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಹೆಚ್.ಕೆ. ಪಾಟೀಲ್ ನೀಡಿದ ಮಾಹಿತಿಯ ಪ್ರಕಾರ, ಈ ಮುಟ್ಟಿನ ರಜೆ ರಾಜ್ಯದ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ ಉದ್ಯಮಗಳು, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಸಂಸ್ಥೆಗಳು, ಮತ್ತು ಖಾಸಗಿ ಕೈಗಾರಿಕಾ ವಲಯಗಳಲ್ಲಿರುವ ಮಹಿಳಾ ನೌಕರರಿಗೆ ಅನ್ವಯವಾಗಲಿದೆ. ಇದರೊಂದಿಗೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ಉದ್ಯೋಗದಲ್ಲಿರುವ ಲಕ್ಷಾಂತರ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಸಿಕ್ಕಿರುವ ಅತ್ಯಂತ ಮಹತ್ವದ ಸೌಕರ್ಯ ಇದಾಗಿದೆ.
ಈ ಕ್ರಮದ ಮೂಲಕ ಮಹಿಳೆಯರ ಕೆಲಸದ ಸ್ಥಳದಲ್ಲಿ ಸಹಾನುಭೂತಿ, ಆರೋಗ್ಯ ಹಾಗೂ ಲಿಂಗ ಸಮಾನತೆಯ ಪರಿಪೂರ್ಣತೆಯತ್ತ ರಾಜ್ಯ ಸರಕಾರ ಬದ್ಧತೆ ವ್ಯಕ್ತಪಡಿಸಿದೆ. ಇದನ್ನು ಹಲವು ಮಹಿಳಾ ಹಕ್ಕುಪಾಲಕರೂ ಸ್ವಾಗತಿಸಬಹುದು ಎಂಬ ನಿರೀಕ್ಷೆಯಿದೆ.