ಮಧುರೈ, ಅ. 09(DaijiworldNews/ TA): ತಮಿಳುನಾಡಿನ ಮಧುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಮಾಹಿತಿ ಬಂದ ತಕ್ಷಣವೇ, ಸ್ಥಳೀಯ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಭದ್ರತಾ ತಪಾಸಣೆ ಹಾಗೂ ಶೋಧ ಕಾರ್ಯಗಳನ್ನು ತ್ವರಿತವಾಗಿ ಆರಂಭಿಸಿದ್ದಾರೆ.

ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳಗಳನ್ನು ಸ್ಥಳಕ್ಕೆ ಆಗಮಿಸಿ ವಿಮಾನ ನಿಲ್ದಾಣದ ಆವರಣದ ಎಲ್ಲ ಭಾಗಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಎಲ್ಲಾ ಪ್ರವೇಶ ವಾಹನಗಳನ್ನು ತಪಾಸಣೆಗೆ ಒಳಪಡಿಸಿದರು. ಈ ಸಂದರ್ಭ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಇದೇ ರೀತಿಯ ಬೆದರಿಕೆ ಇಮೇಲ್ ಬಂದಿತ್ತು. ಬೆಳಿಗ್ಗೆ 6 ಗಂಟೆಗೆ ಬಂದ ಅನಾಮಧೇಯ ಇಮೇಲ್ನಲ್ಲಿ, ವಿಮಾನ ನಿಲ್ದಾಣದ ಜೊತೆಗೆ ಹೈದರಾಬಾದ್ನ ಹಲವು ಶಾಲೆಗಳಲ್ಲಿಯೂ ಸ್ಫೋಟಕಗಳನ್ನು ಇಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಇದರ ಪ್ರತಿಕ್ರಿಯೆಯಲ್ಲಿ ಆರ್ಜಿಐಎ ಮತ್ತು ಸ್ಥಳೀಯ ಪೊಲೀಸ್ ಇಲಾಖೆ ಶೋಧ ಕಾರ್ಯಾಚರಣೆ ಕೈಗೊಂಡಿತು. ಈ ಸ್ಥಳದಲ್ಲಿಯೂ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲವೆಂದು ದೃಢಪಡಿಸಲಾಗಿದೆ.
ಈ ಬೆದರಿಕೆಗಳ ನಡುವೆಯೇ, ಇತ್ತೀಚೆಗಷ್ಟೇ ನಟ-ರಾಜಕಾರಣಿ ದಳಪತಿ ವಿಜಯ್ ಅವರ ಚೆನ್ನೈ ನಿವಾಸಕ್ಕೂ ಬಾಂಬ್ ಬೆದರಿಕೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಅವರ ನಿವಾಸದ ಸುತ್ತಮುತ್ತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿದೆ.
ಇದರೊಂದಿಗೆ, ಮಧುರೈ ಮತ್ತು ಹೈದರಾಬಾದ್ನಲ್ಲಿ ಬಂದ ಇಮೇಲ್ ಬೆದರಿಕೆಗಳ ಹಿಂದೆ ಇದ್ದ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಇಂಥ ಸುಳ್ಳು ಬೆದರಿಕೆಗಳು ಸಾರ್ವಜನಿಕ ಭದ್ರತೆಗೆ ಮತ್ತು ವಿಮಾನ ನಿಲ್ದಾಣದ ದೈನಂದಿನ ಕಾರ್ಯಾಚರಣೆಗಳಿಗೆ ತೀವ್ರ ಅಡ್ಡಿಪಡಿಸುತ್ತವೆ ಎಂಬ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.