ನವದೆಹಲಿ, ಅ. 08 (DaijiworldNews/TA): ಭಾರತದ ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನು ಮುಂದೆ ಜಿಮೇಲ್ ಬಿಟ್ಟು ಜೋಹೋ ಮೇಲ್ ಬಳಸಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿ, ದೇಶೀಯ ತಂತ್ರಜ್ಞಾನ ಬಳಕೆದಾರರಿಗೆ ಹೊಸ ಮಾದರಿ ನಿರ್ಮಿಸಿದ್ದಾರೆ. ಜೋಹೋ ಮೇಲ್, ಚೆನ್ನೈ ಮೂಲದ ತಂತ್ರಜ್ಞಾನ ಕಂಪನಿ ಜೋಹೋ ಕಾರ್ಪೊರೇಷನ್ನಿಂದ ಅಭಿವೃದ್ಧಿಪಡಿಸಲ್ಪಟ್ಟ ಡಿಜಿಟಲ್ ಪ್ಲಾಟ್ಫಾರ್ಮ್ ಆಗಿದ್ದು, ಈ ತಂತ್ರಜ್ಞಾನದ ಬೆಂಬಲದ ಮೂಲಕ ಕೇಂದ್ರ ಸರ್ಕಾರ ‘ಆತ್ಮನಿರ್ಭರ ಭಾರತ’ದ ಕನಸಿಗೆ ಮತ್ತಷ್ಟು ಬಲ ನೀಡಿದೆ.

ಅಮಿತ್ ಶಾ ಅವರು ಈ ಬದಲಾವಣೆಯ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು ಜೋಹೋ ಮೇಲ್ಗೆ ಬದಲಾಗಿದ್ದೇನೆ. ದಯವಿಟ್ಟು ನನ್ನ ಹೊಸ ಇಮೇಲ್ ವಿಳಾಸ [amitshah.bjp@zohomail.in](mailto:amitshah.bjp@zohomail.in) ನ್ನು ಗಮನಿಸಿ” ಎಂದು ಪ್ರಕಟಿಸಿದ್ದಾರೆ. ಅವರ ಈ ಘೋಷಣೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ವಿಶೇಷವಾಗಿ ಅವರು ಪೋಸ್ಟ್ನ ಕೊನೆಗೆ ಬಳಸಿರುವ “Thank you for your kind attention to this matter” ಎಂಬ ಇಂಗ್ಲಿಷ್ ಸಾಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಸುತ್ತಿದ್ದ ಶೈಲಿಯನ್ನು ನೆನಪಿಸುತ್ತದೆ. ಈ ಮೂಲಕ ಅಮಿತ್ ಶಾ ಅವರು ಅಮೆರಿಕದ ತಂತ್ರಜ್ಞಾನಗಳ ಮೇಲಿನ ಅವಲಂಬನೆಗೆ ಟಾಂಗ್ ಕೊಟ್ಟಂತೆ ತೋರುತ್ತಿದೆ.
ಇದಕ್ಕೂ ಮುಂಚೆ, ಕೇಂದ್ರ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಮೈಕ್ರೋಸಾಫ್ಟ್ ಆಫೀಸ್ ಮತ್ತು ಗೂಗಲ್ ವರ್ಕ್ಸ್ಪೇಸ್ ಬಿಟ್ಟು, ಜೋಹೋ ಆಫೀಸ್ ಸೂಟ್ ಬಳಕೆಗಾಗಿ ಸಚಿವಾಲಯದಲ್ಲಿ ಆದೇಶ ಹೊರಡಿಸಿದ್ದರು. ಇದೀಗ ಗೃಹ ಸಚಿವರೂ ಸಹ ಜೋಹೋ ಬಳಸಲು ಮುಂದಾಗಿರುವುದು, ಸರ್ಕಾರದ ಎಲ್ಲಾ ಮಟ್ಟಗಳಲ್ಲಿ ಡಿಜಿಟಲ್ ಸ್ವಾವಲಂಬನೆಯ ಚಟುವಟಿಕೆಗೆ ಉತ್ತೇಜನ ನೀಡುತ್ತದೆ.
ಜೋಹೋ ಮೇಲ್ ಬಗ್ಗೆ ಹೇಳುವುದಾದರೆ, ಇದು ಜಾಹೀರಾತು ಮುಕ್ತ, ಡೇಟಾ ಗೌಪ್ಯತೆಗೆ ಹೆಚ್ಚಿನ ಆದ್ಯತೆ ನೀಡುವ, ಬಲವಾದ ಸ್ಪ್ಯಾಮ್ ಫಿಲ್ಟರ್ಗಳನ್ನು ಹೊಂದಿರುವ ಮತ್ತು ಭಾರತದಲ್ಲಿಯೇ ಡೇಟಾ ಸರ್ವರ್ಗಳನ್ನು ಹೊಂದಿರುವ ವೇದಿಕೆಯಾಗಿದೆ. 1996ರಲ್ಲಿ ಶ್ರೀಧರ್ ವೆಂಬು ಮತ್ತು ಟೋನಿ ಥಾಮಸ್ ಜೋಹೋ ಕಂಪನಿಯನ್ನು ಸ್ಥಾಪಿಸಿದ್ದು, ಇಂದು ಜಾಗತಿಕವಾಗಿ 130 ಮಿಲಿಯನ್ಗಿಂತ ಹೆಚ್ಚು ಬಳಕೆದಾರರ ವಿಶ್ವಾಸ ಪಡೆದಿದೆ.
ಅಮಿತ್ ಶಾ ಅವರ ಈ ನಿರ್ಧಾರ, ಕೇವಲ ಇಮೇಲ್ ಬದಲಾವಣೆಯಷ್ಟಲ್ಲ ಇದು ಭಾರತೀಯ ತಂತ್ರಜ್ಞಾನದ ಮೇಲೆ ವಿಶ್ವಾಸವಿರುವ ರಾಜಕೀಯ ನಾಯಕನ ದೃಷ್ಟಿಕೋನವನ್ನೂ ಪ್ರತಿಬಿಂಬಿಸುತ್ತದೆ. ಸೈಬರ್ ಭದ್ರತೆ, ಡೇಟಾ ಪ್ರೈವಸಿ, ಮತ್ತು ಸ್ವದೇಶಿ ತಂತ್ರಜ್ಞಾನದ ಉತ್ತೇಜನದ ದೃಷ್ಟಿಯಿಂದ ಇದು ಬಹುಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.