ಮುಂಬೈ, ಅ. 08 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಇಂದು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿದರು.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಭಾರೀ ಪ್ರಯಾಣಿಕ ಸಂಚಾರದ ಒತ್ತಡವನ್ನು ಇಳಿಸುವ ಉದ್ದೇಶದಿಂದ ನಿರ್ಮಿತವಾಗಿರುವ ಈ ನೂತನ ವಿಮಾನ ನಿಲ್ದಾಣ, ನಗರಕ್ಕೆ ಮತ್ತೊಂದು ಮಹತ್ವದ ಪ್ರವೇಶದ್ವಾರವಾಗಲಿದೆ.
ಸುಮಾರು ರೂ.19,650 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಗ್ರೀನ್ಫೀಲ್ಡ್ ಯೋಜನೆ, ವಿಶ್ವದ ಗಮನ ಸೆಳೆಯುವಷ್ಟು ವಿಶಿಷ್ಟವಾಗಿದ್ದು, ಪರಿಸರಸ್ನೇಹಿ ತಂತ್ರಜ್ಞಾನ ಮತ್ತು ಭವ್ಯವಾದ ಆಧುನಿಕ ಸೌಕರ್ಯಗಳೊಂದಿಗೆ ಮುಂಬೈನ ವಾಯುಯಾನ ಭದ್ರತೆಯ ಭವಿಷ್ಯವನ್ನು ರೂಪಿಸುತ್ತದೆ. 1,160 ಹೆಕ್ಟೇರ್ನಲ್ಲಿ ವ್ಯಾಪಿಸಿರುವ ಈ ನಿಲ್ದಾಣ, ಮುಂಬೈನ ವಾಯುಯಾನ ಸಾಮರ್ಥ್ಯವನ್ನು ಬಹುತೇಕ ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ.