ಬೆಂಗಳೂರು,ಅ. 07 (DaijiworldNews/AK): ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟಿನ ಆವರಣದಲ್ಲೇ ಶೂ ಎಸೆಯುವ ಕೃತ್ಯ ಖಂಡನೀಯ ಎಂದು ತಿಳಿಸಿದ್ದಾರೆ.

ಇದು ಬಾಬಾ ಸಾಹೇಬ ಡಾ. ಅಂಬೇಡ್ಕರರು ಬರೆದ ಸಂವಿಧಾನಕ್ಕೆ ಅಪಚಾರ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡುವಂಥ ಘಟನೆ. ಇದು ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಅಪಚಾರ ಎಂದು ಆಕ್ಷೇಪಿಸಿದರು.
ಒಬ್ಬ ವಕೀಲರು ಇಂಥ ಪುಂಡಾಟಿಕೆ ಮಾಡಿದ್ದು, ಪ್ರಧಾನಿಯವರೂ ಸೇರಿ ಎಲ್ಲರೂ ಅದನ್ನು ವಿರೋಧಿಸಿದ್ದಾರೆ. ಇದು ದೇಶವೇ ತಲೆತಗ್ಗಿಸುವ ಕೃತ್ಯ. ನಾನೂ ಇದನ್ನು ಖಂಡಿಸುತ್ತೇನೆ ಎಂದು ತಿಳಿಸಿದರು. ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಇದು ಕ್ಷಮಾಪಣೆಗೆ ಅರ್ಹ ಕೃತ್ಯವಲ್ಲ; ಆ ವ್ಯಕ್ತಿಗೆ ಕಠಿಣ ಶಿಕ್ಷೆ ಕೊಡಬೇಕೆಂದು ಒತ್ತಾಯಿಸಿದರು.
ಜಾತಿ ಜಾತಿಗಳನ್ನು ಒಡೆಯಲು ಗಣತಿ ಬಳಕೆ
ಜಾತಿ ಜನಗಣತಿ ನಡೆಯಬೇಕಾದ ರೀತಿ ನಡೆಯುತ್ತಿಲ್ಲ; ಸಾಫ್ಟ್ವೇರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ; 60 ಪ್ರಶ್ನೆಗೆ ಉತ್ತರಿಸಲು ಒಬ್ಬೊಬ್ಬರಿಗೆ ಒಂದೊಂದು ಗಂಟೆ ಬೇಕಾಗುತ್ತದೆ. ಸರಕಾರ ತಪ್ಪು ಅಂಕಿ ಅಂಶ ಕೊಡುತ್ತಿದೆ. ನಿನ್ನೆಯೇ ಶೇ 65 ಗಣತಿ ಮುಗಿದಿದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಯಾರ ಮನೆಯಲ್ಲೂ ಪ್ರಾರಂಭವೇ ಆಗಿಲ್ಲ ಎಂದು ಗಮನ ಸೆಳೆದರು.
ಇವತ್ತು ಅಪಾರ್ಟ್ಮೆಂಟ್ಗಳಲ್ಲಿ ಪ್ರಾರಂಭ ಮಾಡುತ್ತಾರಂತೆ. ಸುಳ್ಳಿನ ಕಂತೆ ಮೇಲೆ ಕಂತೆ ಹೇಳುವ ಕೆಲಸ ಸರಕಾರದ್ದು ಎಂದು ಟೀಕಿಸಿದರು. ಬಿಜೆಪಿ ಇದನ್ನು ವಿರೋಧಿಸುತ್ತದೆ ಎಂದಿದ್ದರು. ನಮ್ಮ ವಿರೋಧ ಇಲ್ಲ; ಕೋರ್ಟ್ ಆದೇಶ ಪ್ರಕಾರ ಏನಾಗಬೇಕೋ ಅದನ್ನು ಮಾಡಿ ಎಂದು ಒತ್ತಾಯಿಸಿದರು.
ಜಾತಿ ಜಾತಿಗಳನ್ನು ಒಡೆಯಲು ಗಣತಿಯನ್ನು ಬಳಸುತ್ತಿದ್ದಾರೆ. ಸತ್ಯಾಸತ್ಯತೆ ಹೊರಬರಬೇಕು. ಯಾರಿಗೆ ಸೌಲಭ್ಯ ಸಿಕ್ಕಿಲ್ಲವೋ ಅವರಿಗೆ ಕೊಡಬೇಕೆಂಬುದು ನಿಮ್ಮ ಉದ್ದೇಶವಲ್ಲ ಎಂಬುದು ನೀವೇ ಹೇಳಿದ್ದೀರಿ. ಮುಖ್ಯಮಂತ್ರಿಗಳು ದ್ವಂದ್ವ ಹೇಳಿಕೆ ಕೊಡುತ್ತಾರೆ. ವೀರಶೈವರು, ಲಿಂಗಾಯತರಿಗೆ ಇಲ್ಲದ ಕಾಳಜಿ ಮುಖ್ಯಮಂತ್ರಿಗಳಿಗೆ ಯಾಕೆ ಎಂದು ಕೇಳಿದರು. ಅದು ಪ್ರತ್ಯೇಕ ಧರ್ಮ ಎನ್ನಲು ಇವರೇನು ಧರ್ಮಗುರುಗಳೇ ಎಂದು ಪ್ರಶ್ನಿಸಿದರು. ಈ ರೀತಿ ದ್ವಂದ್ವಕ್ಕೆ ತೆರೆ ಎಳೆಯಲು ಒತ್ತಾಯಿಸಿದರು.