ಬೆಂಗಳೂರು, ಜೂ30(Daijiworld News/SS): ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿದೇಶ ಪ್ರವಾಸವನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ವಿದೇಶಕ್ಕೆ ಯಡಿಯೂರಪ್ಪ, ಈಶ್ವರಪ್ಪ ಅವರ ಅನುಮತಿ ತೆಗೆದುಕೊಂಡು ಹೋಗಬೇಕಿತ್ತಾ..? ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಕ್ಕೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ಅನುಮತಿ ತೆಗೆದುಕೊಂಡು ಹೋಗಬೇಕಾ?. ನಮ್ಮ ಸಮಾಜದ ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಸಿಎಂ ಹೋಗಿದ್ದಾರೆ. ಯಾರ ದುಡ್ಡಿನಿಂದಲೂ ಮುಖ್ಯಮಂತ್ರಿಗಳು ವಿದೇಶಕ್ಕೆ ಹೋಗಿಲ್ಲ. ಅದಕ್ಕೂ ಹೋಗಬಾರದು ಅಂದ್ರೆ ಹೇಗೆ?. ಬೆಳಗ್ಗೆಯಿಂದ ಸಂಜೆ ತನಕ ಹೀಗೆ ಮಾತಾಡೋದು ತಮಾಷೆನಾ..? ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಮೆರಿಕಾದ ನ್ಯೂಜೆರ್ಸಿ ಕುಮಾರಸ್ವಾಮಿ ತೆರಳಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಮೆರಿಕದಲ್ಲಿ ಭವ್ಯ ಸ್ವಾಗತ ದೊರತಿದೆ.
ಒಂದು ವಾರಗಳ ಕಾಲ ಎಚ್.ಡಿ.ಕುಮಾರಸ್ವಾಮಿ ಅಮೆರಿಕದ ಖಾಸಗಿ ಪ್ರವಾಸ ಕೈಗೊಂಡಿದ್ದಾರೆ. ಜುಲೈ 4ರಂದು ಅಮೆರಿಕ ಒಕ್ಕಲಿಗರ ಪರಿಷತ್ತಿನ ಸಮಾವೇಶ ಕೂಡ ನಡೆಯಲಿದ್ದು, ಅದರಲ್ಲೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಗಳನ್ನು ಮುಗಿಸಿ, ಜುಲೈ 7ಕ್ಕೆ ಅಮೆರಿಕಾದಿಂದ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಸಿಎಂ ಅವರ ಈ ಪ್ರವಾಸ ಸಂಪೂರ್ಣ ಖಾಸಗಿಯಾಗಿದ್ದು, ಸರ್ಕಾರ ಯಾವುದೇ ವೆಚ್ಚ ಭರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.