ನವದೆಹಲಿ,ಅ. 07 (DaijiworldNews/AK): ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಪಿಐಎಲ್ನಲ್ಲಿ, ಕಲುಷಿತ ಕೆಮ್ಮಿನ ಸಿರಪ್ ತಯಾರಿಕೆ, ಪರೀಕ್ಷೆ ಮತ್ತು ವಿತರಣೆಯ ಬಗ್ಗೆ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈಗಾಗಲೇ ಕೆಮ್ಮಿನ ಸಿರಪ್ ಸೇವಿಸಿ 16 ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಡಾ. ಪ್ರವೀಣ್ ಸೋನಿ ಅವರನ್ನು ಬಂಧಿಸಿ ಅಮಾನತುಗೊಳಿಸಲಾಗಿದೆ. ಕೆಮ್ಮಿನ ಸಿರಪ್ ತಯಾರಿಸಿದ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಕೂಡ ಈ ವಿಷಯದಲ್ಲಿ ಕಠಿಣ ಕ್ರಮ ಕೈಗೊಂಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಮತ್ತು ಔಷಧ ನಿಯಂತ್ರಕರನ್ನು ವರ್ಗಾಯಿಸಿದ್ದಾರೆ. ತನಿಖೆಗಾಗಿ ಪೊಲೀಸರು 12 ಸದಸ್ಯರ ವಿಶೇಷ ತನಿಖಾ ತಂಡವನ್ನು ಸಹ ರಚಿಸಿದೆ.
ಔಷಧ ನಿರೀಕ್ಷಕ ಚಿಂದ್ವಾರ ಗೌರವ್ ಶರ್ಮಾ, ಔಷಧ ನಿರೀಕ್ಷಕ ಜಬಲ್ಪುರ ಶರದ್ ಕುಮಾರ್ ಜೈನ್ ಮತ್ತು ರಾಜ್ಯದ ಆಹಾರ ಮತ್ತು ಔಷಧ ಆಡಳಿತದ ಉಪನಿರ್ದೇಶಕ ಶೋಭಿತ್ ಕೋಸ್ಟಾ ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಐಎಎಸ್ ಅಧಿಕಾರಿ ಔಷಧ ನಿಯಂತ್ರಕ ದಿನೇಶ್ ಮೌರ್ಯ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ