ಹಾಸನ, ಅ. 06 (DaijiworldNews/AA): ಮಧ್ಯಪ್ರದೇಶ ಸಿರಪ್ ದುರಂತ ಪ್ರಕರಣದ ಬಳಿಕ ನಮ್ಮ ರಾಜ್ಯದಲ್ಲಿ ಕೂಡ ಈ ಬಗ್ಗೆ ಕ್ರಮ ವಹಿಸಲಾಗಿದೆ. ಔಷಧ ಮಾದರಿ ಪರೀಕ್ಷೆಯಲ್ಲಿ ರಾಜ್ಯ ನಂಬರ್ ಒನ್ ಇದೆ. ಈ ಕಾಫ್ ಸಿರಪ್ ನಮ್ಮ ರಾಜ್ಯದಲ್ಲಿ ಸರಬರಾಜು ಆಗಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, "ಮಧ್ಯಪ್ರದೇಶದ ಘಟನೆ ಅತ್ಯಂತ ಆಘಾತಕಾರಿ. ಮಕ್ಕಳಿಗೆ ಔಷಧ ಕೊಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಈ ಬಗ್ಗೆ ಒಂದು ಮಾರ್ಗಸೂಚಿ ಕೂಡ ಬಿಡುಗಡೆ ಮಾಡುತ್ತೇವೆ. ಈ ಹಿಂದೆ ಆರೋಗ್ಯ ಸುರಕ್ಷತೆ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಆಹಾರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮ ವಹಿಸಲಾಗಿದೆ. ಮಿನರಲ್ ವಾಟರ್ ತಯಾರಿಗೆ ಸಂಬಂಧ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ" ಎಂದರು.
ಕರ್ನಾಟಕದಲ್ಲೂ ಎರಡು ಸಿರಪ್ ಪತ್ತೆ ಪ್ರಕರಣ ಕುರಿತು ಮಾತನಾಡಿದ ಅವರು, "ನಮ್ಮ ಇಲಾಖೆಯಿಂದ ಇಂದು ಮಾರ್ಗಸೂಚಿ ಬಿಡುಗಡೆ ಮಾಡುತ್ತಾರೆ. ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂದು ತಿಳಿಸುತ್ತಾರೆ. ಇದೇ ತರಹ ಬೇರೆ ಕಂಪನಿಗಳು ಕಾಫ್ ಸಿರಪ್ ತಯಾರಿಕೆ ಮಾಡಿದರೆ ಅದರ ಮಾದರಿ ಸಂಗ್ರಹಣೆ ಮಾಡಿ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ. ಒಂದೆರಡು ದಿನದಲ್ಲಿ ಅದರ ರಿಪೋರ್ಟ್ ಬರುತ್ತದೆ, ಎಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದು ಹೇಳಿದರು.
"ನಾವು ಬಂದ ಮೇಲೆ ನಮ್ಮ ಇಲಾಖೆಯನ್ನು ಚುರುಕುಗೊಳಿಸಿದ್ದೇವೆ. ಸಾಕಷ್ಟು ತಪಾಸಣೆ ಮಾಡಿಸುತ್ತಿದ್ದೇವೆ. ಕರ್ನಾಟಕ ಈಗ ಬಹಳ ಮುಂಚೂಣಿಯಲ್ಲಿದೆ. ಔಷಧ ವಿಚಾರದಲ್ಲಿ ಪಾರದರ್ಶಕತೆ ತರುವ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಈ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳ ಜೊತೆ ಮಾಹಿತಿಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ತಯಾರಿಕೆ ಮಾಡುವವರು ಒಂದು ಕಡೆ ಇರುತ್ತಾರೆ, ಸರಬರಾಜು ಮಾಡುವವರು ಮತ್ತೊಂದು ಕಡೆ ಇರುತ್ತಾರೆ. ಕರ್ನಾಟಕದಲ್ಲಿ ಮಾದರಿ ಸರಿ ಇಲ್ಲ ಎಂದು ಗೊತ್ತಾದಾಗ ಇಡೀ ದೇಶಕ್ಕೆ ಗೊತ್ತಾಗಬೇಕು. ಈ ಕಾಫ್ ಸಿರಪ್ ನಮ್ಮಲ್ಲಿ ಎಲ್ಲೂ ಸರಬರಾಜು ಆಗಿಲ್ಲ" ಎಂದು ಮಾಹಿತಿ ನೀಡಿದರು.