ನವದೆಹಲಿ, ಅ. 05 (DaijiworldNews/AA): ತನ್ನ ತಾಯಿ ಮತ್ತು ಅಕ್ಕ ತನಗೆ ಕುರ್ಕುರೆ ಕೊಡಿಸಿ ಎಂದಿದ್ದಕ್ಕೆ ಹೊಡೆದಿದ್ದಾರೆ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯ ಚಿತರ್ವೈ ಕಲಾ ಗ್ರಾಮದಲ್ಲಿ ನಡೆದಿದೆ.

ಕುರ್ಕುರೆ ಪ್ಯಾಕೆಟ್ ಖರೀದಿಸಲು ಆ ಬಾಲಕ ತನ್ನ ತಾಯಿಯ ಬಳಿ 20 ರೂ. ಕೊಡುವಂತೆ ಕೇಳಿದ. ಅದಕ್ಕೆ ಆಕೆ ಒಪ್ಪಲಿಲ್ಲ. ಆತ ಹಠ ಮಾಡಿದಾಗ ಆ ತಾಯಿ ಮತ್ತು ಅವರ ಮಗಳು ಸೇರಿ ಆ ಬಾಲಕನನ್ನು ಹೊಡೆದಿದ್ದಾರೆ. ಇದರಿಂದ ನೊಂದ ಬಾಲಕ ಅಮ್ಮನ ಮೊಬೈಲ್ ತೆಗೆದುಕೊಂಡು ಭಾರತದ ಪೊಲೀಸ್ ತುರ್ತು ಸಂಖ್ಯೆ 112ಗೆ ಕರೆ ಮಾಡಿ, ಚಿಪ್ಸ್ ಪ್ಯಾಕೆಟ್ ಕೊಡಿಸಿ ಎಂದಿದ್ದಕ್ಕೆ ಅಮ್ಮ ಮತ್ತು ಅಕ್ಕ ಸೇರಿ ನನಗೆ ಹೊಡೆದಿದ್ದಾರೆ ಎಂದು ಹೇಳುತ್ತಾ ಅಳಲಾರಂಭಿಸಿದ್ದಾನೆ.
ಸದ್ಯ ಈ ಕರೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ಶಾಂತವಾಗಿ ಅವನಿಗೆ ಧೈರ್ಯ ತುಂಬುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜೊತೆಗೆ ಆ ಪೊಲೀಸ್ ಬಾಲಕನಿಗೆ ಸಮಾಧಾನ ಮಾಡಿದ್ದಾರೆ. ಆತನ ಅಮ್ಮನಿಗೆ ಇನ್ಮುಂದೆ ಆ ಮಗುವನ್ನು ಹೊಡೆಯಬೇಡಿ ಎಂದು ಹೇಳಿದ್ದಾರೆ.
ಬಳಿಕ ಆ ಬಾಲಕನ ಮನೆಗೆ ಹೋಗಿ ತಾವೇ ಐದಾರು ಕುರ್ಕುರೆ ಪ್ಯಾಕೆಟ್ಗಳನ್ನು ಆತನಿಗೆ ಕೊಟ್ಟು ಸರ್ಪ್ರೈಸ್ ನೀಡಿದ್ದಾರೆ.