ಬೆಂಗಳೂರು, ಅ. 05 (DaijiworldNews/AA): ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಿತಿ ಅವೈಜ್ಞಾನಿಕವಾಗಿದ್ದು, ತಾಂತ್ರಿಕ ಸಮಸ್ಯೆಯಿಂದ ಕೂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಧಿಕಾರಿಗಳಿಗೆ ಸರಿಯಾದ ಮಾಹಿತಿ ತಿಳಿದಿಲ್ಲ. ಅನಾವಶ್ಯಕ ಪ್ರಶ್ನೆಗಳಿಂದ ಜನರು ಗೊಂದಲಕ್ಕೀಡಾಗುತ್ತಿದ್ದು, ಇದನ್ನು ಸರ್ಕಾರ ಸರಳೀಕರಣ ಮಾಡಬೇಕು. ತಾಂತ್ರಿಕ ಸಲಹಾ ಸಮಿತಿ ರಚಿಸಿ ಅದರಿಂದ ವರದಿ ಪಡೆದು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು" ಎಂದು ಹೇಳಿದ್ದಾರೆ.
ಇನ್ನು ಸರ್ವೇ ವೇಳೆ ಸಿಬ್ಬಂದಿಗೆ ಸೋಮಣ್ಣ ಕ್ಲಾಸ್ ತೆಗೆದುಕೊಂಡಿದ್ದು, "ಸಂಪೂರ್ಣವಾಗಿ ಆನ್ಲೈನ್ನಲ್ಲೇ ಸರ್ವೇ ಮಾಡೋದ? ರಾಜ್ಯದಲ್ಲಿ ಎಷ್ಟು ಜನ ಎಬ್ಬೆಟ್ಟು ಇದ್ದಾರೆ. ಅವರೆಲ್ಲ ಹೇಗೆ ಆನ್ಲೈನ್ನಲ್ಲಿ ಮಾಡಿಸಿಕೊಳ್ಳುತ್ತಾರೆ? ನೀವು ಅಧಿಕಾರಿಗಳು ಸರ್ಕಾರಕ್ಕೆ ಹೇಳಬೇಕಲ್ವಾ" ಎಂದಿದ್ದಾರೆ.
"ನಮ್ಮ ಕೇಂದ್ರ ಸರ್ಕಾರ ಮುಂದೆ ಗಣತಿ ಮಾಡಿಸುತ್ತೆ. ಹೇಗೆ ಮಾಡಿಸುತ್ತೆ ನೋಡಿ, ಅದನ್ನು ಸಹ ನೀವೇ ಮಾಡೋದು. ಅಷ್ಟು ಪ್ರಶ್ನೆಗಳು ಬೇಕಾ? ಇದೇಲ್ಲ ನೀವು ಸರ್ಕಾರಕ್ಕೆ ತಿಳಿಸೋದು ಬೇಡ್ವಾ? ಸರ್ಕಾರಿ ನೌಕರರು ಸರ್ಕಾರದ ಏಜೆಂಟ್ ಆಗಿ ಕೆಲಸ ಮಾಡಬಾರದು. ಈ ಸಿದ್ದರಾಮಯ್ಯ ಅವರಿಗೆ ಜಾತಿ ಲೆಕ್ಕ ಬೇಕು. ಅದಕ್ಕೆ ಇದನ್ನೆಲ್ಲ ಮಾಡ್ತಿದ್ದಾರೆ. ಸರ್ವೇ ಮಾಡೋಕೆ ನೀವು 9 ಜನ ಯಾಕೆ ಬಂದಿದ್ದೀರಿ" ಎಂದು ಪ್ರಶ್ನಿಸಿದ್ದಾರೆ.