ಬೆಂಗಳೂರು, ಅ. 03 (DaijiworldNews/TA): ಒಂದು ಕಾಲದಲ್ಲಿ ಕಾಡಾಗಿದ್ದ ಪ್ರದೇಶಗಳೆಲ್ಲವೂ ಈಗ ನಾಡಾಗಿದ್ದು, ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮ ಮೇಲಿನ ಜವಾಬ್ದಾರಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅವರು ಅರಣ್ಯ ಇಲಾಖೆಯಿಂದ ಆಯೋಜಿಸಲಾದ ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ವಿಧಾನಸೌಧದಿಂದ ಲಾಲ್ಬಾಗ್ವರೆಗೆ ನಡೆದ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡುತ್ತಾ, ಕರ್ನಾಟಕವು ಅರಣ್ಯ ಮತ್ತು ಪ್ರಕೃತಿ ಸಂಪತ್ತಿನಲ್ಲಿ ಹೇರಳವಾಗಿ ಸಮೃದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯರು ಪ್ರಕೃತಿಯನ್ನು ದೇವತೆ ಎಂದು ಪೂಜಿಸುತ್ತಿದ್ದುದಾಗಿ ನೆನಪಿಸಿಕೊಂಡು, ಮುಂದಿನ ಪೀಳಿಗೆಗಾಗಿ ಅರಣ್ಯ ಪ್ರದೇಶವನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿವೆ ಎಂದರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶಾಲೆಗಳು ಪ್ರತಿ ವಲಯದಲ್ಲಿ ವಿದ್ಯಾರ್ಥಿಗಳ ಮೂಲಕ ಗಿಡಗಳನ್ನು ನೆಟ್ಟು ಬೆಳೆಸುವಂತೆ ಪ್ರೇರೇಪಣೆ ನೀಡಿದ್ದು, ಕಳೆದ ಎರಡು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಮಿಕ್ಕ ಸಸಿಗಳನ್ನು ನೆಟ್ಟು ಕಾಪಾಡಲಾಗಿದೆ. ಈ ಯಶಸ್ವಿ ಕಾರ್ಯಕ್ರಮವನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಮತ್ತು ಅರಣ್ಯ ರಾಯಭಾರಿ ಅನಿಲ್ ಕುಂಬ್ಳೆ, ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ ಮತ್ತು ಇತರರು ಭಾಗವಹಿಸಿದ್ದರು.
ಇದೇ ವೇಳೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸರ್ಕಾರ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ಸಮೀಕ್ಷೆ ನಡೆಸುತ್ತಿಲ್ಲ ಎಂಬ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಉತ್ತರ ನೀಡಿ, "ಗ್ಯಾರಂಟಿ ಯೋಜನೆಗಳನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಈ ಯೋಜನೆಗಳು ಕರ್ನಾಟಕದ ಜನರ ಬದುಕಿಗೆ ಭರವಸೆ ನೀಡಿವೆ. ಯಾವುದೇ ಸರ್ಕಾರ ಅಧಿಕಾರದಲ್ಲಿ ಬಂದರೂ ಈ ಯೋಜನೆಗಳು ನಿಲ್ಲಿಸುವುದಿಲ್ಲ" ಎಂದು ಗಂಭೀರವಾಗಿ ತಿಳಿಸಿದ್ದಾರೆ. ಜಾತಿ ಆಧಾರಿತ ಜನಗಣತಿಯ ಬಗ್ಗೆ ಬಿಜೆಪಿ ನಾಯಕರ ಆರೋಪಗಳನ್ನು ಅವರು ತಳ್ಳಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ದೇಶವ್ಯಾಪಿಯಾಗಿ ಒಪ್ಪಿಕೊಳ್ಳಲಾಗಿದೆ ಎಂದು ಅಭಿಮಾನದಿಂದ ಹೇಳಿದರು.