ರಾಮನಗರ, 28 (DaijiworldNews/TA): ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಮತ್ತು ಶಕ್ತಿ ಯೋಜನೆಗಳಲ್ಲಿ ದುರುಪಯೋಗ ನಡೆಯುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದ್ದು, ಈ ಕುರಿತು ತಕ್ಷಣವೇ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಶನಿವಾರ ಜಿಲ್ಲೆಯಲ್ಲಿ ನಡೆದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡಲಾಗುವ ಅಕ್ಕಿಯನ್ನು ಕೆಲವರು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಇದೇ ರೀತಿ ಶಕ್ತಿ ಯೋಜನೆಯಡಿಯಲ್ಲಿ ಉಚಿತ ಬಸ್ಸು ಪ್ರಯಾಣ ಸೌಲಭ್ಯವನ್ನು ಸರ್ಕಾರಿ ನೌಕರಿಯಲ್ಲಿರುವ ಮಹಿಳೆಯರು ಅನಧಿಕೃತವಾಗಿ ಬಳಸುತ್ತಿರುವುದಾಗಿ ವರದಿಯಾಗಿದೆ. ಇಂತಹ ದುರುಪಯೋಗಗಳಿಗೆ ಕಡಿವಾಣ ಹಾಕಲು ನಿರ್ದಿಷ್ಟ ಬದಲಾವಣೆಗಳನ್ನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮಗಳು ಸಾರ್ವಜನಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಆರ್ಥಿಕ ನೆಲೆಯಾದ ಬೆಂಬಲವನ್ನು ನೀಡಲು ರೂಪುಗೊಂಡಿವೆ. ಈ ಹಿನ್ನೆಲೆಯಲ್ಲಿ, ಈ ಯೋಜನೆಗಳ ಉದ್ದೇಶವನ್ನು ಬದಲಾಯಿಸಬಾರದಾಗಿದ್ದು, ದುರುಪಯೋಗ ತಡೆಯುವುದು ಸರ್ಕಾರದ ಆದ್ಯತೆ ಎಂದು ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ, ಕೇಂದ್ರ ಸರ್ಕಾರದ ನಿಲುವಿನ ಕುರಿತಾಗಿ ಮಾತನಾಡಿದ ಅವರು, “ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಹಲವು ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ. ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮಹಿಳೆಯರಿಗೆ ನಗದು ಸಹಾಯಧನ ನೀಡುತ್ತಿದ್ದಾರೆ. ಆದರೆ, ಕರ್ನಾಟಕದ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಧಮ್ಕಿ ನೀಡುತ್ತಿದ್ದಾರೆ. ಈ ಯೋಜನೆಗಳನ್ನು ಕಿತ್ತಾಕಲು ಶಡ್ಯಂತ್ರ ನಡೆಸುತ್ತಿದ್ದಾರೆ,” ಎಂದು ಆರೋಪಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಯಾವುದೇ ಒತ್ತಡಕ್ಕೆ ಸರ್ಕಾರ ಬಗ್ಗುವುದಿಲ್ಲ ಎಂದ ಅವರು, “ಯಾರು ಕಾವೇರಿ ಆರತಿಗೆ ತೊಂದರೆ ಮಾಡಿದರೂ ಯೋಜನೆ ನಿಲ್ಲುವುದಿಲ್ಲ. ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಈ ಯೋಜನೆಗಳನ್ನು ನಿಲ್ಲಿಸುವ ಅಧಿಕಾರ ಬಿಜೆಪಿಯ ಕೈಯಲ್ಲಿಲ್ಲ,” ಎಂದು ಬಿಗುವಾದ ಸಂದೇಶ ನೀಡಿದರು.
ಇಂದಿರಾ ಗಾಂಧಿ, ದೇವರಾಜ ಅರಸು, ಎಸ್.ಎಂ. ಕೃಷ್ಣ ಅವರಂತಹ ನಾಯಕರು ರೂಪಿಸಿದ್ದ ಜನಪರ ಯೋಜನೆಗಳು ಇಂದು ಕೂಡ ಜನರ ಬದುಕನ್ನು ಸ್ಪರ್ಶಿಸುತ್ತಿವೆ ಎಂದು ವಿವರಿಸಿದ ಡಿ.ಕೆ. ಶಿವಕುಮಾರ್, “ಪಂಚ ಗ್ಯಾರಂಟಿ ಯೋಜನೆಗಳು ಕೂಡ ಇಂದಿನ ಮತ್ತು ಭವಿಷ್ಯದ ಪೀಳಿಗೆಗಳ ಶ್ರೇಯಸ್ಸಿಗೆ ನೆರವಾಗುತ್ತವೆ. ಯಾವುದೇ ರಾಜಕೀಯ ಶಕ್ತಿಯು ಇವುಗಳನ್ನು ನಿಲ್ಲಿಸಲು ಸಾಧ್ಯವಿಲ್ಲ,” ಎಂದು ಸವಾಲು ಎಸೆದರು.