ಚೆನ್ನೈ, ಸೆ. 27 (DaijiworldNews/AK): ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ನೇತೃತ್ವದ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ 31 ಜನರು ಮೃತಪಟ್ಟಿದ್ದಾರೆ.

ಜನರು ಮೂರ್ಛೆ ತಪ್ಪಿದ ವಿಷಯ ಗಮನಕ್ಕೆ ಬರುತ್ತಿದ್ದಂತೆ ವಿಜಯ್ ಅವರು ತಕ್ಷಣ ಆ್ಯಂಬುಲೆನ್ಸ್ ಅನ್ನು ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದರು. ಕಾಲ್ತುಳಿತದ ನಂತರ ವಿಜಯ್ ಅರ್ಧಕ್ಕೇ ತಮ್ಮ ಭಾಷಣವನ್ನು ಮುಗಿಸಿದ್ದಾರೆ.
ಪೊಲೀಸರು ಇನ್ನೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ರಸ್ತೆಯ ತುಂಬ ಸಾವಿರಾರು ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಕರೂರಿನಲ್ಲಿ ನಡೆದ ತಮ್ಮ ರ್ಯಾಲಿಯಲ್ಲಿ ಜನರು ಪ್ರಜ್ಞೆ ತಪ್ಪಿದಾಗ “ಪೊಲೀಸರೇ, ದಯವಿಟ್ಟು ಸಹಾಯ ಮಾಡಿ” ಎಂದು ವಿಜಯ್ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ಯಾರೂ ಗಾಬರಿಯಾಗಬೇಡಿ, ಈಗ ಆ್ಯಂಬುಲೆನ್ಸ್ ಬರುತ್ತದೆ” ಎಂದು ಅವರು ಮೈಕ್ನಲ್ಲಿ ಹೇಳಿದ್ದಾರೆ.
ಈ ವೇಳೆ ಅರ್ಧಕ್ಕೆ ತಮ್ಮ ಭಾಷಣವನ್ನು ನಿಲ್ಲಿಸಿದ ವಿಜಯ್, ಉಸಿರಾಟದ ತೊಂದರೆ ಅನುಭವಿಸುತ್ತಿರುವ ಜನರಿಗೆ ನೀರು ವಿತರಿಸಲು ಮತ್ತು ಆಂಬ್ಯುಲೆನ್ಸ್ ಸೇವೆಗಳನ್ನು ಸಂಘಟಿಸಲು ಮುಂದಾದರು. ಅಗತ್ಯವಿರುವವರನ್ನು ತಲುಪಲು ತುರ್ತು ಆಂಬ್ಯುಲೆನ್ಸ್ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರನ್ನು ಅವರು ಒತ್ತಾಯಿಸಿದರು. ಅಸ್ವಸ್ಥರಾಗಿರುವವರಿಗೆ ಸಹಾಯ ಮಾಡಲು ನೀರಿನ ಬಾಟಲಿಗಳನ್ನು ವಿತರಿಸಲಾಯಿತು ಮತ್ತು ವೈದ್ಯಕೀಯ ತಂಡಗಳನ್ನು ತಕ್ಷಣವೇ ನಿಯೋಜಿಸಲಾಯಿತು. ಪ್ರಜ್ಞೆ ತಪ್ಪಿದ ಹಲವಾರು ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು.
ಈ ರ್ಯಾಲಿಯು 2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜ್ಯಾದ್ಯಂತ ನಡೆಯುತ್ತಿರುವ ವಿಜಯ್ ಅವರ ಪ್ರಚಾರದ ಭಾಗವಾಗಿತ್ತು.