ಬೆಂಗಳೂರು,ಸೆ. 26 (DaijiworldNews/AA): ಕಾಂಗ್ರೆಸ್ ಸರ್ಕಾರ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ದಲಿತರ ಹಣವನ್ನು ಬೇರೆ ಬೇರೆ ಕಾರಣಗಳಿಗೆ ದುರುಪಯೋಗ ಮಾಡಿ ಪರಿಶಿಷ್ಟ ಜಾತಿ ವರ್ಗಗಳನ್ನು ಸಂಪೂರ್ಣವಾಗಿ ತುಳಿದಿದೆ, ವಂಚನೆ ಮಾಡಿದೆ ಮತ್ತು ಮೋಸ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣ 42 ಸಾವಿರ ಕೋಟಿ ರೂಪಾಯಿಗಳನ್ನು ದಲಿತರಿಗಾಗಿ ಇಟ್ಟಿದ್ದೇವೆ ಎಂದು ಹೇಳಿದ್ದು, ಅದರಲ್ಲಿ 21 ಸಾವಿರ ಕೋಟಿ ಮೊತ್ತ ಎಲ್ಲ ಇಲಾಖೆಗಳಿಗೆ ಹಂಚಿಕೆಯಾಗಿದೆ. ಉಳಿದ 21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡು ದಲಿತರನ್ನು ವಂಚಿಸಿದ್ದಾರೆ ಎಂದು ದೂರಿದರು.
ಉಳಿದ ದಲಿತರ ಹಣ 7 ಸಾವಿರ ಕೋಟಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟು ಅದರಲ್ಲೂ ಪ್ರಜಾಪ್ರಭುತ್ವ ದಿನಾಚರಣೆಗಾಗಿ ಹಣ, ಸಂವಿಧಾನ ದಿನಾಚರಣೆಗಾಗಿ ಹಣ. ಅಷ್ಟೇ ಅಲ್ಲದೆ ನಾಗಮೋಹನ್ ದಾಸ್ ಆಯೋಗಕ್ಕೂ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣ- ಹೀಗೆ ದಲಿತರ ಹಣವನ್ನು ಬೇರೆ ಬೇರೆ ಕಾರಣಗಳಿಗೆ ದುರುಪಯೋಗ ಮಾಡಿದೆ ಎಂದು ಆರೋಪಿಸಿದರು.
ಪರಿಶಿಷ್ಠ ಜಾತಿ ವರ್ಗಗಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವ ಸವಲತ್ತುಗಳು ಸಿಗಬೇಕಾಗಿತ್ತೋ ಈ ವಿಚಾರದಲ್ಲಿ ಅನೇಕ ನ್ಯೂನತೆಗಳು ಇತ್ತೀಚೆಗೆ ಕಂಡುಬರುತ್ತಿದೆ ಎಂದು ದೂರಿದರು. ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳ ಶಾಲಾ ಮತ್ತು ಕಾಲೇಜಿನ ಶುಲ್ಕವನ್ನು ಸರ್ಕಾರವೇ ಭರಿಸುತ್ತಿತ್ತು. ಪ್ರಸ್ತುತ ಮೊದಲು ನೀವು ಶಾಲಾ ಮತ್ತು ಕಾಲೇಜಿನ ಶುಲ್ಕವನ್ನು ಕಟ್ಟಿದ ನಂತರ ನಾವು ಮರುಪಾವತಿ ಮಾಡುವ ಪದ್ಧತಿಗೆ ಬಂದಿದ್ದಾರೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಭಿಕ್ಷೆ ಬೇಡುವ ಸ್ಥಿತಿ..
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕೆ ಭಿಕ್ಷೆ ಪಾತ್ರೆ ಎತ್ತುಕೊಂಡು ಹೊರಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.