ಚಿಕ್ಕಮಗಳೂರು, ಸೆ. 23 (DaijiworldNews/AA): ಜಿಎಸ್ಟಿ ಏರಿಸಿದ್ದೇ ಅವರು ಆಗಲೂ ಬಿಜೆಪಿಗರು ಸಂಭ್ರಮಾಚರಣೆ ಮಾಡಿದ್ದರು. ಈಗ ಇಳಿಸಿದ್ದೂ ಅವರೇ ಈಗಲೂ ಸಂಭ್ರಮಾಚರಣೆ ಮಾಡ್ತಿದ್ದಾರೆ. ಜಿಎಸ್ಟಿ ಜಾಸ್ತಿ ಮಾಡಿದಾಗಲೂ ಅವರದ್ದೇ ಶಬ್ಬಾಸ್ಗಿರಿ, ಕಡಿಮೆ ಮಾಡಿದ್ರೂ ಅವರದ್ದೇ ಶಬ್ಬಾಸ್ಗಿರಿ. ಈ ದೇಶವನ್ನು ನಾವೀಗ ಒಂದು ಕಾಮಿಡಿಗೆ ಇಟ್ಟುಕೊಂಡಿದ್ದೇವೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಕೇಂದ್ರ ಸರ್ಕಾರ ಜಿಎಸ್ಟಿ ಇಳಿಸಿದ ವಿಚಾರವಾಗಿ ಮಾತನಾಡಿದ ಅವರು, "ಜಿಎಸ್ಟಿ ಕಡಿಮೆಯಾಗಿದ್ರೂ ಇನ್ಪುಟ್ ಸಬ್ಸಿಡಿಯಲ್ಲಿ ಬಹಳಷ್ಟು ಗೊಂದಲಗಳಿವೆ. 18% ಗಿಂತ ಜಾಸ್ತಿ ಬೇಡ ಎಂದು ರಾಹುಲ್ ಗಾಂಧಿಯವರು ಹೇಳಿದಾಗ ಎಲ್ಲರೂ ನಕ್ಕರೂ, ಈಗ ಅದನ್ನೇ ಮಾಡಿದ್ದಾರೆ. ಜನರೇಷನ್ ನೆಕ್ಸ್ಟ್ ಟ್ಯಾಕ್ಸ್ ಅಂತ ಪ್ರಪಂಚದಲ್ಲಿ ಎಲ್ಲಾದರೂ ಇರುತ್ತಾ? ಇವೆಲ್ಲಾ ಏನ್ ಟೈಟಲ್ಗಳು" ಎಂದು ತಿಳಿಸಿದರು.
"ಪಹಲ್ಗಾಮ್ ದಾಳಿ, ವೋಟ್ ಚೋರಿ ಆರಂಭವಾದಾಗ ಜನರಿಗೆ ದಾರಿ ತಪ್ಪಿಸಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಎದ್ದು ಬಂದು ನಾವು ಓಬಿಸಿ ಜಾತಿಗಣತಿ ಮಾಡ್ತೀವಿ ಎಂದಿದ್ದರು. ನೀವೆಲ್ಲಾ ಜಾತಿಗಣತಿ ಎನ್ನುತ್ತಿದ್ದೀರಿ. ಕೇಂದ್ರ ಸರ್ಕಾರ ಹೇಳಿದ್ದು ಓಬಿಸಿ ಜಾತಿಗಣತಿ ಮಾಡ್ತೀವಿ ಎಂದಿತ್ತು" ಎಂದು ಹೇಳಿದರು.
"ಕೇಂದ್ರ ಸರ್ಕಾರ ಭಾರತದಾದ್ಯಂತ ಮಾಡೋದು ಜಾತಿ ಒಡೆಯೋ ಕೆಲಸ ಅಲ್ಲ, ನಾವು ಮಾಡಿದ್ರೆ ಜಾತಿ ಒಡೆಯೋ ಕೆಲಸ. ಕಾಂಗ್ರೆಸ್ ಇರುವಲ್ಲಿ ಕಾಲು ಕರೆದು ಜಗಳ ಮಾಡಲು ಮುಂದಾಗ್ತಾರೆ. ಕಾಂಗ್ರೆಸ್ಸಿಗರಿಗೆ ತೊಂದರೆ ಕೊಡುವುದು ಬಿಟ್ಟರೆ ಅವರಿಗೆ ಬೇರೆ ಏನಿದೆ ಹೇಳಿ" ಕೇಳಿದ್ದಾರೆ.