ಲಕ್ನೋ, ಸೆ. 23 (DaijiworldNews/AA): 23 ತಿಂಗಳ ಸೆರೆವಾಸದ ಬಳಿಕ ಸೆ.23 ರಂದು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಮ್ ಖಾನ್ ಅವರು ಉತ್ತರಪ್ರದೇಶದ ಸೀತಾಪುರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಸೆ.10ರಂದು ಅಲಹಾಬಾದ್ ಹೈಕೋರ್ಟ್ ಅಜಮ್ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ ನ್ಯಾಯಾಲಯ ವಿಧಿಸಿದ ದಂಡ ಪಾವತಿ ಹಾಗೂ ಇನ್ನಿತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ಹಿನ್ನೆಲೆ ಬಿಡುಗಡೆ ವಿಳಂಬವಾಗಿತ್ತು. ಇದೀಗ ಇಂದು ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಅವರು ಬಿಡುಗಡೆಯಾದರು.
ಇನ್ನೂ ಅಜಮ್ ಖಾನ್ ಬಿಡುಗಡೆ ಹಿನ್ನೆಲೆ ಸೀತಾಪುರ ನಗರದಲ್ಲಿ ಸೆಕ್ಷನ್ 144ರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇನ್ನು ಎಸ್ಪಿ ನಾಯಕ ಅಜಮ್ ಖಾನ್ ಅವರ ವಿರುದ್ಧ ಒಟ್ಟು 104 ಪ್ರಕರಣಗಳಿದ್ದು, ಆ ಪೈಕಿ 12 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ. ಇನ್ನೂ 5 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, 7 ಪ್ರಕರಣಗಳು ಖುಲಾಸೆ ಮಾಡಲಾಗಿದೆ.
ಪ್ರಸ್ತುತ 59 ಪ್ರಕರಣಗಳು ಸೆಷನ್ಸ್ ನ್ಯಾಯಾಲಯದಲ್ಲಿ ಹಾಗೂ 19 ಪ್ರಕರಣಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ. ಸದ್ಯ ಹೈಕೋರ್ಟ್ ನಿಂದ ಜಾಮೀನು ಮಂಜೂರಾದ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.