ಬೆಂಗಳೂರು, ಸೆ. 21 (DaijiworldNews/AA): ಸರ್ವೆಗೆ ಶಿಕ್ಷಕರನ್ನು ಬಳಸದ ಹೊರತು ಬೇರೆ ಪರ್ಯಾಯ ವ್ಯವಸ್ಥೆ ಇಲ್ಲ. ಅದಕ್ಕಾಗಿಯೇ ಶಾಲಾ ಅವಧಿ ಬದಲು ರಜೆ ವೇಳೆ ಶಿಕ್ಷಕರನ್ನು ಸರ್ವೆಗೆ ಬಳಸಿಕೊಳ್ಳುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಸಮೀಕ್ಷೆ ಮಾಡುವುದು ಅಗತ್ಯ. ವಿವಿಧ ಸಮುದಾಯಗಳ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ತಿಳಿದುಕೊಳ್ಳಬೇಕಾಗುತ್ತದೆ. ಸಾಮಾಜಿಕ, ಆರ್ಥಿಕ ಸಮೀಕ್ಷೆ ಕಾರ್ಯವನ್ನು ಶಿಕ್ಷಕ ವರ್ಗ ಉತ್ತಮವಾಗಿ ನಡೆಸಿಕೊಡಲಿದೆ. ಶಿಕ್ಷಕರ ವಿಚಾರದಲ್ಲಿ ಬಿಜೆಪಿ ಗೊಂದಲಗಳನ್ನು ಮೂಡಿಸುವ ಕೆಲಸ ಮಾಡಬಾರದು" ಎಂದರು.
ಬಿಜೆಪಿಯವರು ಗಣೇಶ ಹಬ್ಬ ದಲ್ಲಿ ಗಲಾಟೆ ಹಬ್ಬ ಮಾಡ್ತಾರೆ, ಬಿಜೆಪಿಯವರು ಹೇಳೋದೆಲ್ಲವೂ ಸುಳ್ಳು. ಬಿಜೆಪಿ ಕಾಲದಲ್ಲೂ ಶಿಕ್ಷಕರ ವಲಯದ ಮೇಲೆ ಅನ್ಯ ಕೆಲಸಗಳ ಒತ್ತಡ ಇರಲಿಲ್ಲವಾ? ಶಿಕ್ಷಕರ ಮೇಲೆ ಅನ್ಯ ಕೆಲಸಗಳ ಒತ್ತಡ ಇದೆ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಸಮೀಕ್ಷೆ ಅರ್ಥಪೂರ್ಣವಾಗಿ ಆಗಬೇಕು. ಇದು ಅಗತ್ಯವಾಗಿ ನಡೆಯಬೇಕಿರುವ ಬೆಳವಣಿಗೆ. ಜನ ಕೂಡಾ ಇದಕ್ಕೆ ಸಹಕಾರ ಕೊಡಬೇಕು. ಕೇಂದ್ರ ಸರ್ಕಾರವೂ ಶಿಕ್ಷಕರನ್ನೇ ಬಳಸಿಕೊಂಡು ಜನಗಣತಿ ಮಾಡೋದು" ಎಂದು ಹೇಳಿದರು.
"ಎಲ್ಲ ಸರಿಯಿದೆ ಅಂದಾಗ ಬಿಜೆಪಿಯವ್ರು ಏನಾದ್ರೂ ಒಂದು ಹುಳಿ ಹಾಕಿಬಿಡುತ್ತಾರೆ. ಶಿಕ್ಷಕರಿಗೆ ಸಮೀಕ್ಷೆ ಚೆನ್ನಾಗಿ ಮಾಡಿಕೊಡಿ, ಸಹಕಾರ ಕೊಡಿ ಅಂತ ಮನವಿ ಮಾಡಿಕೊಂಡಿದ್ದೇವೆ. ಶಿಕ್ಷಕರು ಸಹ ಅವರ ಹಕ್ಕು ಎಂದು ಭಾವಿಸಿ ಸಮೀಕ್ಷೆ ಮಾಡಬೇಕು. ಹತ್ತು ಜನ ನಾವು ಸಮೀಕ್ಷೆ ಮಾಡಲ್ಲ ಅಂದರೆ ಅವರೇ ಅವರ ಹಕ್ಕು ಉಲ್ಲಂಘನೆ ಮಾಡಿದ ಹಾಗೆ. ಶಿಕ್ಷಕರಿಗೆ ಅಂತ ದಸರಾ ರಜೆ ಕೆಲ ದಿನ ವಿಸ್ತರಣೆ ಮಾಡುವುದು ಈ ಹಂತದಲ್ಲಿ ಕಷ್ಟ. ದಸರಾ ರಜೆ ವಿಸ್ತರಣೆ ಪ್ರಸ್ತಾಪ ಇಲ್ಲ. ದಸರಾ ರಜೆ ಮುಗಿಯುತ್ತಿದ್ದ ಹಾಗೆ ಶಾಲೆಗಳು ಆರಂಭ ಆಗುತ್ತವೆ" ಎಂದು ಮಾಹಿತಿ ನೀಡಿದರು.