ಬೆಂಗಳೂರು, ಸೆ.21 (DaijiworldNews/TA): ಬೆಂಗಳೂರಿನ ರಸ್ತೆಗಳ ಮೇಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಗುಂಡಿಗಳ ಸಮಸ್ಯೆ ಇದೀಗ ಸರ್ಕಾರದ ಗಮನಸೆಳೆದಿದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಅಕ್ಟೋಬರ್ 31ರೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಗಡುವು ನೀಡಿದ್ದು, ಈ ಕಾರ್ಯಕ್ಕೆ ಹೆಚ್ಚುವರಿ ರೂ. 750 ಕೋಟಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. ಶನಿವಾರ ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಸ್ತೆಗಳ ಗುಂಡಿ ಸಮಸ್ಯೆಯ ಕುರಿತು ತೀವ್ರವಾಗಿ ಚರ್ಚೆ ನಡೆಸಲಾಗಿತ್ತೆಂದು ತಿಳಿಸಿದರು.

ಈಗಾಗಲೇ ನಗರದಲ್ಲಿ 10 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಡಿಸಿಎಂ ತಿಳಿಸಿದ್ದಾರೆ. ಇವುಗಳನ್ನು ಶೀಘ್ರ ಸರಿಪಡಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಕೂಡಾ ಅವರು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ರಸ್ತೆ ಗುಂಡಿಗಳ ಪಟ್ಟಿ ಮಾಡಲು ಹಾಗೂ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ. ಸಾರ್ವಜನಿಕರು ತಮ್ಮ ಪ್ರದೇಶದಲ್ಲಿನ ಗುಂಡಿಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ, ಅದನ್ನು ಆದಷ್ಟು ಬೇಗ ಮುಚ್ಚುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಮಳೆಗಾಲದ ಪರಿಣಾಮವಾಗಿ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಈ ಹಿನ್ನೆಲೆಯಲ್ಲಿ ಮಳೆಯ ನಂತರ ಪ್ರತ್ಯೇಕ ಯೋಜನೆ ರೂಪಿಸಲು ಸಿಎಂ ನಿರ್ದೇಶನ ನೀಡಿದ್ದಾರೆ. “ದೇಶದ ಎಲ್ಲ ನಗರಗಳಲ್ಲಿಯೂ ರಸ್ತೆ ಗುಂಡಿಗಳ ಸಮಸ್ಯೆ ಇದೆ. ಆದರೆ ಬೆಂಗಳೂರು ಮಾತ್ರ ಹೆಚ್ಚು ಸುದ್ದಿಯಲ್ಲಿದೆ, ಇದು ಮಾಧ್ಯಮ ಸ್ವಾತಂತ್ರ್ಯದ ಪ್ರತಿಬಿಂಬ,” ಎಂದು ಡಿಸಿಎಂ ಹೇಳಿದ್ದಾರೆ. ಅವರು ಮಾಧ್ಯಮಗಳೇ ಈ ಸಮಸ್ಯೆಯನ್ನು ಬಿಂಬಿಸುತ್ತಿರುವ ಬಗ್ಗೆ ಒತ್ತಿಹೇಳಿದರು.
ಇದರೊಂದಿಗೆ ವಿಪಕ್ಷ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, “ರಸ್ತೆ ಗುಂಡಿಗಳ ವಿಚಾರದಲ್ಲಿ ರಾಜಕೀಯ ಮಾಡುವವರು ಮಾಡಲಿ, ಆದರೆ ನಾವು ಸಂಚಾರ ಸುಗಮವಾಗಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ” ಎಂದರು. ಈಗಾಗಲೇ 7,000ಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದ್ದು, ಬಾಕಿಯಿರುವ 5,000ಕ್ಕೂ ಅಧಿಕ ಗುಂಡಿಗಳನ್ನು ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.