ದಿಸ್ಪುರ, ಸೆ. 20 (DaijiworldNews/AA): ಸ್ಕೂಬಾ ಡೈವಿಂಗ್ ವೇಳೆ ಸಾವನ್ನಪ್ಪಿದ್ದ ಪ್ರಸಿದ್ಧ ಅಸ್ಸಾಮಿ ಗಾಯಕ ಜುಬೀನ್ ಗಾರ್ಗ್ ಅವರ ಮರಣೋತ್ತರ ಪರೀಕ್ಷೆ ಸಿಂಗಾಪುರದಲ್ಲಿ ನಡೆಯುತ್ತಿದೆ. ಆದರೆ ಇದೀಗ ಅಸ್ಸಾಂ ಸರ್ಕಾರ ಜುಬೀನ್ ಗಾರ್ಗ್ ಅವರ ಸಾವಿನ ತನಿಖೆ ನಡೆಸಲು ಮುಂದಾಗಿದೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು, "ಜುಬೀನ್ ಗಾರ್ಗ್ ಸಾವನ್ನಪ್ಪುವ ಮುನ್ನ ಕಾರ್ಯಕ್ರಮ ಆಯೋಜಕರಾದ ಶ್ಯಾಮ್ ಕನು ಮಹಾಂತ ಹಾಗೂ ಸಿದ್ಧಾರ್ಥ ಶರ್ಮಾ ಅವರ ಜೊತೆಗಿದ್ದರು. ಹೀಗಾಗಿ ಈ ಕುರಿತು ಅಸ್ಸಾಂ ಸರ್ಕಾರ ತನಿಖೆ ನಡೆಸಲಿದ್ದು, ಕಾರ್ಯಕ್ರಮ ಆಯೋಜಕರ ವಿರುದ್ಧ ಮೋರಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
"ಆಯೋಜಕರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳನ್ನು ಸಿಐಡಿಗೆ ವರ್ಗಾಯಿಸಿ, ವಿಚಾರಣೆ ನಡೆಸಿ ಎಂದು ಅಸ್ಸಾಂ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ. ಸಿಂಗಾಪುರ ಕಮಿಷನರ್ ಅವರೊಂದಿಗೆ ಮಾತನಾಡಿ ವಿವರವಾಗಿ ತನಿಖೆ ಮಾಡುವಂತೆ ಮನವಿ ಮಾಡಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ಗಾರ್ಗ್ ಅವರು ಸಿಂಗಾಪುರಕ್ಕೆ ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಜುಬೀನ್ ಗರ್ಗ್ ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ, ಬೋಡೊ, ಕರ್ಬಿ, ತಿವಾ, ನೇಪಾಳಿ, ಭೋಜ್ಪುರಿ, ಭಿಷ್ಣುಪ್ರಿಯ ಮಣಿಪುರಿ ಹೀಗೆ ಹಲವು ಭಾಷೆಗಳಲ್ಲಿ ಹಾಡಿದ್ದಾರೆ.