ಗುವಾಹಟಿ, ಸೆ. 19 (DaijiworldNews/AA): ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ (ಆಳ ಸಮುದ್ರದಲ್ಲಿ ಈಜಾಟ) ಸಾಹಸ ಮಾಡುವಾಗ ಪ್ರಸಿದ್ಧ ಅಸ್ಸಾಮಿ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಜುಬೀನ್ ಗಾರ್ಗ್ (52) ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜುಬೀನ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಗಾಯಕ ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರದಲ್ಲಿದ್ದರು. ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.
ಜುಬೀನ್ ಗರ್ಗ್ ಹಿಂದಿ, ಬೆಂಗಾಲಿ, ಅಸ್ಸಾಮಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ, ಬೋಡೊ, ಕರ್ಬಿ, ತಿವಾ, ನೇಪಾಳಿ, ಭೋಜ್ಪುರಿ, ಭಿಷ್ಣುಪ್ರಿಯ ಮಣಿಪುರಿ ಹೀಗೆ ಹಲವು ಭಾಷೆಗಳಿಗೆ ಹಾಡಿದ್ದಾರೆ.
ಇನ್ನು ಜುಬೀನ್ ಗರ್ಗ್ ನಿಧನಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ. "ಇಂದು ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ. ಜುಬೀನ್ ಅವರ ಧ್ವನಿಯು ಜನರನ್ನು ಚೈತನ್ಯಗೊಳಿಸುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿತ್ತು. ನಮ್ಮ ಭವಿಷ್ಯದ ಪೀಳಿಗೆಯು ಅವರನ್ನು ಅಸ್ಸಾಂನ ಸಂಸ್ಕೃತಿಯ ಧೀಮಂತ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತದೆ. ಆ ಮಾಂತ್ರಿಕ ಧ್ವನಿ ಶಾಶ್ವತವಾಗಿ ಮೌನವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.