ನವದೆಹಲಿ, ಸೆ. 19 (DaijiworldNews/AA): ಪಾಕಿಸ್ತಾನಕ್ಕೆ ಹೋದ್ರೆ ನನಗೆ ಮನೆಗೆ ಹೋದ ಅನುಭವವಾಗುತ್ತೆ ಎಂದು ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾರತದ ವಿದೇಶಾಂಗ ನೀತಿ ಮತ್ತು ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧಗಳ ಕುರಿತು ಮಾತನಾಡಿದ ಸ್ಯಾಮ್ ಪಿತ್ರೋಡಾ ಅವರು, "ನೆರೆಹೊರೆಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆಯ ಸಮಸ್ಯೆಗಳ ಹೊರತಾಗಿಯೂ ಭಾರತವು ಪಾಕಿಸ್ತಾನ ಮತ್ತು ಬಾಂಗ್ಲಾದೊಂದಿಗೆ ತೊಡಗಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
"ನಮ್ಮ ವಿದೇಶಾಂಗ ನೀತಿಯು ಮೊದಲು ನಮ್ಮ ನೆರೆಹೊರೆಯ ರಾಷ್ಟ್ರಗಳಿಗೆ ಪ್ರಾಮುಖ್ಯತೆ ನೀಡಬೇಕು. ನಮ್ಮ ನೆರೆಹೊರೆ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸಬಹುದೇ? ಎಂಬುದರ ಬಗ್ಗೆ ಚಿಂತಿಸಬೇಕು. ನಾನು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಹೋಗಿದ್ದೇನೆ. ಈ ವೇಳೆ ನನಗೆ ನನ್ನ ತಾಯ್ನಾಡಿನಲ್ಲೇ ಇದ್ದೇನೆಂಬ ಭಾವನೆ ಮೂಡಿಸಿತ್ತು" ಎಂದಿದ್ದಾರೆ.
ಮುಂದುವರಿದು, "ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿಗೆ ಪ್ರವಾಸಕ್ಕೆ ಹೋದ ಸಮಯದಲ್ಲಿ ನನ್ನ ಮನೆಯಂತೆಯೇ ಭಾಸವಾಗುತ್ತಿತ್ತು. ಪಾಕಿಸ್ತಾನಕ್ಕೆ ಹೋದಾಗಲೂ ನಾನು ವಿದೇಶದಲ್ಲಿದ್ದೇನೆ ಅನ್ನಿಸಲೇ ಇಲ್ಲ ನನ್ನ ಮನೆಯಂತೆ ಭಾಸವಾಗಿತ್ತು. ಅವರು ನನ್ನ ಹಾಡುಗಳನ್ನು ಇಷ್ಟಪಡ್ತಾರೆ, ನನ್ನಂತೆಯೇ ಮಾತನಾಡ್ತಾರೆ, ನನ್ನ ಆಹಾರವನ್ನೇ ತಿನ್ನುತ್ತಾರೆ. ನಾವು ಅವರೊಂದಿಗೆ ಶಾಂತಿ ಸಾಮರಸ್ಯದಿಂದ ಬದುಕಲು ಕಲಿಯಬೇಕು" ಎಂದು ಹೇಳಿದ್ದಾರೆ.