ಬೆಂಗಳೂರು, ಸೆ. 19(DaijiworldNews/AK): ಊರಿನಿಂದ ಬೆಂಗಳೂರಿಗೆ ಬಂದಾಗ ರಾಜಧಾನಿಯೂ ಇಷ್ಟು ಕೆಟ್ಟು ಹೋಗಿದೆ ಎಂಬುದೇ ನಮಗೆ ಸಮಾಧಾನ; ಆದರೆ, ಇದನ್ನೇ ಕಾಂಗ್ರೆಸ್ ಸರಕಾರದವರ ಬಳಿ ಕೇಳಿದರೆ, ರಾಜ್ಯವನ್ನು ಸಮಾನವಾಗಿ ಇಟ್ಟಿದ್ದೇವೆ; ಎಲ್ಲ ಕಡೆ ಗುಂಡಿ, ಎಲ್ಲ ಕಡೆ ಮನುಷ್ಯರು ಓಡಾಡದಂತೆ ಇಟ್ಟಿರುವುದೇ ನಮ್ಮ ಕೀರ್ತಿ ಎನ್ನುತ್ತಾರೆ ಎಂದು ಮಾಜಿ ಸಚಿವ ಡಿಎನ್. ಜೀವರಾಜ್ ಅವರು ವ್ಯಂಗ್ಯವಾಡಿದ್ದಾರೆ.

ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್ ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಕೈಗಾರಿಕೆಗಳು ಬೆಂಗಳೂರು ಬಿಟ್ಟು ಹೋಗುವುದಾಗಿ ಹೇಳಿದರೆ, ಹೋದರೆ ಹೋಗು ಎನ್ನುವ ತಾಕತ್ತು ನಮಗಿದೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ಮಲೆನಾಡಿನ ಪರಿಸ್ಥಿತಿ ಅತ್ಯಂತ ಕಷ್ಟದಲ್ಲಿದೆ. ರಸ್ತೆಗಳಲ್ಲಿ ಗುಂಡಿ ತಪ್ಪಿಸಲು ಹೋಗಿ ನಮ್ಮದೇ ವಿಧಾನಸಭಾ ಕ್ಷೇತ್ರದಲ್ಲಿ 2 ಜನರ ಮೇಲೆ ಕಾರು ಹತ್ತಿಹೋಗಿ ಸತ್ತಿದ್ದನ್ನು ನೋಡಿದ್ದೇವೆ. ಗುಂಡಿಯಿಂದ ದ್ವಿಚಕ್ರವಾಹನದಿಂದ ಬಿದ್ದು 4 ಜನರು ಕಾಲು ಮುರಿದುಕೊಂಡಿದ್ದಾರೆ. ಅವರ ಚಿಕಿತ್ಸೆಗೆ ಅವರ ಬಳಿ ಹಣ ಇಲ್ಲ ಎಂದು ಬೇಸರದಿಂದ ತಿಳಿಸಿದರು.