ಬೆಂಗಳೂರು, ಸೆ. 19(DaijiworldNews/TA): ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆಯೆಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಗಂಭೀರ ಆರೋಪಕ್ಕೆ ಚುನಾವಣಾ ಆಯೋಗ ನೇರ ಪ್ರತಿಕ್ರಿಯೆ ನೀಡಿದ್ದು, ಆ ಘಟನೆಗೆ ಸಂಬಂಧಿಸಿದ ನಿಖರ ಅಂಕಿಅಂಶಗಳನ್ನು ಬಹಿರಂಗಗೊಳಿಸಿದೆ. 2023 ರಲ್ಲಿ ಆಳಂದ ಕ್ಷೇತ್ರದ ಮತದಾರರ ಹೆಸರನ್ನು ಡಿಲೀಟ್ ಮಾಡುವ ಸಂಬಂಧ 6,018 ಅರ್ಜಿಗಳು ಬಂದಿದ್ದು, ಅವುಗಳನ್ನು ಎನ್ವಿಎಸ್ಪಿ , ವಿಹೆಚ್ಎ , ಗರುಡ ಆ್ಯಪ್ಗಳ ಮೂಲಕ ಸಲ್ಲಿಸಲಾಗಿತ್ತು. ಆದರೆ ಪರಿಶೀಲನೆ ನಡೆಸಿದ ನಂತರ ಕೇವಲ 24 ಅರ್ಜಿಗಳು ಸತ್ಯವಾಗಿರುವುದು ದೃಢಪಟ್ಟಿತ್ತು. ಉಳಿದ 5,994 ಅರ್ಜಿಗಳು ತಿರಸ್ಕರಿಸಲ್ಪಟ್ಟಿದ್ದವು ಎಂದು ಆಯೋಗ ತಿಳಿಸಿದೆ.

ಆಯೋಗವು ಈ ಅರ್ಜಿಗಳನ್ನು ತಕ್ಷಣವೇ ಸ್ಪಂದಿಸಿ ಅಳಿಸದಂತೆ ಎಚ್ಚರ ವಹಿಸಿತ್ತು. ಬದಲಾಗಿ, ಈ ಪ್ರಕರಣದ ಬಗ್ಗೆ 2023ರ ಫೆಬ್ರವರಿ 21ರಂದು ಕ್ಷೇತ್ರ ಚುನಾವಣಾ ನೋಂದಣಾಧಿಕಾರಿ ಪ್ರಾಥಮಿಕ ತನಿಖೆ ನಡೆಸಿ ಎಫ್ಐಆರ್ ದಾಖಲಿಸಿದ್ದರು. ಮತದಾರರ ಹೆಸರನ್ನು ಅಕ್ರಮವಾಗಿ ಅಳಿಸಲು ಫಾರ್ಮ್ 7 ಅನ್ನು ದುರುಪಯೋಗ ಮಾಡಲಾಗುತ್ತಿದೆ ಎಂಬ ದೂರಿನ ಆಧಾರದ ಮೇಲೆ ತನಿಖೆ ಪ್ರಾರಂಭವಾಗಿತ್ತು.
2023ರ ಸೆಪ್ಟೆಂಬರ್ 6ರಂದು, ಈ ಸಂಬಂಧ ಲಭ್ಯವಿದ್ದ ಎಲ್ಲಾ ಮಾಹಿತಿಯನ್ನು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದರು. ನಂತರ ಆಯೋಗವು ಈ ಪ್ರಕರಣವನ್ನು ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಿತು. ತನಿಖಾ ತಂಡಕ್ಕೆ ಒದಗಿಸಿದ ಮಾಹಿತಿಯಲ್ಲಿ – ಫಾರ್ಮ್ ರೆಫರೆನ್ಸ್ ನಂಬರು, ಆಕ್ಷೇಪಣೆ ಸಲ್ಲಿಸಿದವರ ಹೆಸರು, EPIC ನಂಬರ್, ಲಾಗಿನ್ಗೆ ಬಳಸಿದ ಮೊಬೈಲ್ ನಂಬರ್, IP ವಿಳಾಸ, ಅರ್ಜಿ ಸಲ್ಲಿಸಿದ ದಿನಾಂಕ ಹಾಗೂ ಸ್ಥಳದ ಮಾಹಿತಿ ಸೇರಿದ್ದು, ಆಯೋಗ ಸಂಪೂರ್ಣ ಸಹಕಾರ ನೀಡಿರುವುದಾಗಿ ಹೇಳಿದೆ.
ರಾಹುಲ್ ಗಾಂಧಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ, “ಆಳಂದ ಕ್ಷೇತ್ರದಲ್ಲಿ 6,018 ಮತದಾರರ ಹೆಸರುಗಳನ್ನು ಕೇವಲ ಕರ್ನಾಟಕದ ಮೊಬೈಲ್ ಸಂಖ್ಯೆಗಳ ಮೂಲಕ ಡಿಲೀಟ್ ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ವಿರುದ್ಧದ ಕ್ರಮ” ಎಂದು ಆರೋಪಿಸಿದ್ದರು. ಇದರ ತೀವ್ರ ಪ್ರತಿಕ್ರಿಯೆಯಾಗಿ ಆಯೋಗ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರು ಆನ್ಲೈನ್ ಮೂಲಕ ನೇರವಾಗಿ ಮತದಾರರ ಹೆಸರುಗಳನ್ನು ಅಳಿಸಲು ಸಾಧ್ಯವಿಲ್ಲ ಎಂದೂ ಹೇಳಿದೆ. ಆಯೋಗದ ಈ ಸ್ಪಷ್ಟನೆ ರಾಹುಲ್ ಗಾಂಧಿ ಅವರ ಆರೋಪಕ್ಕೆ ನಿಖರ ಅಂಕಿಅಂಶಗಳೊಂದಿಗೆ ತಿರುಗೇಟು ನೀಡಿದಂತೆ ಕಾಣುತ್ತದೆ.