ನವದೆಹಲಿ, ಸೆ. 17 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆ.17) 75ನೇ ಹುಟ್ಟುಹಬ್ಬದ ಸಂಭ್ರಮ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋನ್ ಕರೆ ಮಾಡಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಟ್ರಂಪ್ ಶುಭಾಶಯಕ್ಕೆ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತ-ಅಮೆರಿಕ ಸಂಬಂಧಗಳನ್ನು ಉತ್ತಮಗೊಳಿಸುವ ಬದ್ಧತೆ ಮತ್ತು ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕದ ನಿಲುವಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ.
ನಿಮ್ಮಂತೆಯೇ ನಾನು ಕೂಡ ಭಾರತ-ಯುಎಸ್ ಸಮಗ್ರ ಮತ್ತು ಜಾಗತಿಕ ಸಹಭಾಗಿತ್ವವನ್ನು ಎತ್ತರಕ್ಕೆ ಕೊಂಡೊಯ್ಯಲು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರದತ್ತ ನಿಮ್ಮ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್ನಲ್ಲಿ, ಪ್ರಧಾನಿ ಮೋದಿಯವರೊಂದಿಗೆ ಸಂಭಾಷಣೆ ಅದ್ಭುತವಾಗಿತ್ತು. ಉಕ್ರೇನ್-ರಷ್ಯಾ ಯುದ್ಧವನ್ನು ಪರಿಹರಿಸುವಲ್ಲಿ ಅಮೆರಿಕದ ಉಪಕ್ರಮಗಳಿಗೆ ಭಾರತದ ಬೆಂಬಲಕ್ಕಾಗಿ ಮೋದಿ ಅವರನ್ನು ಶ್ಲಾಘಿಸುತ್ತೇನೆಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಮೋದಿಯವರೊಂದಿಗೆ ಮಾತನಾಡಲು ಎದುರು ನೋಡುತ್ತಿರುವುದಾಗಿ ಅಮೆರಿಕದ ಅಧ್ಯಕ್ಷ ತಿಳಿಸಿದ್ದಾರೆ. ಎರಡೂ ಕಡೆಯವರು ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.