ನವದೆಹಲಿ,ಸೆ. 02 (DaijiworldNews/AK): ದೆಹಲಿಯ ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡ ಆರೋಪದ ಮೇಲೆ ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ಇಂದು (ಮಂಗಳವಾರ) ನೋಟಿಸ್ ಜಾರಿ ಮಾಡಿದೆ.

ಈ ನೋಟಿಸ್ ಅನ್ನು ನವದೆಹಲಿಯ ಜಿಲ್ಲಾ ಚುನಾವಣಾ ಅಧಿಕಾರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಅಧಿಕೃತ ಆದೇಶದ ಪ್ರತಿಯೊಂದಿಗೆ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 8ರಂದು ಬೆಳಿಗ್ಗೆ 11 ಗಂಟೆಯೊಳಗೆ ನೋಟಿಸ್ಗೆ ಪ್ರತಿಕ್ರಿಯಿಸಲು ಕಾಂಗ್ರೆಸ್ ನಾಯಕ ಪವನ್ ಅವರಿಗೆ ಸೂಚಿಸಲಾಗಿದೆ.
ಈ ನೋಟಿಸ್ ಪ್ರಕಾರ, ಪವನ್ ಖೇರಾ ಅವರ ಹೆಸರನ್ನು ನವದೆಹಲಿ ಮತ್ತು ಜಂಗ್ಪುರ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ಬಹು ಮತದಾರರ ನೋಂದಣಿಗಳನ್ನು ಹೊಂದಿರುವುದು ಶಿಕ್ಷಾರ್ಹ ಅಪರಾಧ. ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.