ಬೆಂಗಳೂರು, ಸೆ. 02 (DaijiworldNews/AK): ತರಾತುರಿಯಲ್ಲಿ ಜಾತಿ ಸಮೀಕ್ಷೆ ಬೇಡ ಎಂಬುದಾಗಿ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನು ಬಿಜೆಪಿ ನಿಯೋಗವು ಒತ್ತಾಯಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.

ಇಂದು ಬಿಜೆಪಿ ನಿಯೋಗವು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು. 15 ದಿನಗಳಲ್ಲಿ ಮತ್ತು ದಸರಾ ಸಂದರ್ಭದಲ್ಲಿ ಸಮೀಕ್ಷೆ ಮುಗಿಸುತ್ತೇವೆ ಎಂಬುದು ಸರಿಯಲ್ಲ; ಯಾವುದೋ ಒತ್ತಡಕ್ಕೆ ಒಳಗಾಗಿ ಸಮೀಕ್ಷೆ ಮಾಡುವುದು ಸರಿಯಲ್ಲ. ಸುಮಾರು ಒಂದೂಮುಕ್ಕಾಲರಿಂದ 2 ಕೋಟಿ ಮನೆಗಳ ಸಮೀಕ್ಷೆ ಸುಲಭಸಾಧ್ಯವಲ್ಲ; ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡಲು ಒತ್ತಾಯಿಸಿದ್ದೇವೆ ಎಂದು ವಿವರಿಸಿದರು.
ಹೊಸ ಜಾತಿಗಳ ಸೃಷ್ಟಿಗೆ ಆಕ್ಷೇಪ
1,400 ಜಾತಿಗಳ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಿಸಿ ಅದರ ಸಂಬಂಧ ಆಕ್ಷೇಪಣೆಗಳನ್ನು ಕೇಳಿದ್ದಾರೆ. ಸರಕಾರದ ಯಾವುದೇ ಜಾತಿ ಪಟ್ಟಿಯಲ್ಲಿ ಇಲ್ಲದ, ಯಾವ ಆಯೋಗದ ಜಾತಿ ಪಟ್ಟಿಯಲ್ಲಿ ಇಲ್ಲದ ಹೊಸ ಜಾತಿಗಳನ್ನು ಸೃಷ್ಟಿಸಿದ್ದಾರೆ. ಕುರುಬ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್- ಈ ರೀತಿ 107 ಕಡೆಗಳಲ್ಲಿ ಹೊಸ ಜಾತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಿಗೆ ಕೋಡ್ ನಂಬರ್ ನೀಡಿದ್ದು, ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಆಕ್ಷೇಪಿಸಿದರು.
ಇಡೀ ರಾಜ್ಯದಲ್ಲಿ ಇದೊಂದು ಜನಾಂದೋಲನ ಆಗುವ ಸಾಧ್ಯತೆಗಳಿವೆ. ಕ್ರಿಶ್ಚಿಯನ್, ಎಂದಾಗ 2-3 ಉಪ ಜಾತಿ ಕೇಳಿದ್ದೆವು. ಮುಸ್ಲಿಮರಲ್ಲಿ ಕೆಲವು ಉಪ ಜಾತಿ ಕೇಳಿದ್ದೆವು. ಎಲ್ಲ ಹಿಂದೂ ಉಪ ಜಾತಿಗಳಿಗೆ ಕ್ರಿಶ್ಚಿಯನ್, ಮುಸ್ಲಿಂ ಎಂದು ಹಾಕಿ ಮತ್ತೊಂದು ರೀತಿ ಮತಾಂತರಕ್ಕೆ ಪ್ರೇರಣೆ ಕೊಡುವ ಹುನ್ನಾರವನ್ನು ಸರಕಾರ ಮಾಡಿದೆ ಎಂದು ಟೀಕಿಸಿದರು.
ಇದು ಮತ್ತೊಂದು ಮೀಸಲಾತಿಯ ಹುನ್ನಾರ ಎಂದು ಜನರಲ್ಲಿ ಅನುಮಾನಗಳಿವೆ ಎಂದು ತಿಳಿಸಿದ್ದು, ಹೊಸದಾಗಿ ಸೃಷ್ಟಿಸಿದ ಜಾತಿಗಳನ್ನು ಪಟ್ಟಿಯಿಂದ ಕೈಬಿಡಲು ಆಗ್ರಹಿಸಿದ್ದಾಗಿ ಹೇಳಿದರು.
ಸಮೀಕ್ಷೆಗೆ ಸ್ವೀಕೃತಿ ಪತ್ರವನ್ನು ಕಡ್ಡಾಯವಾಗಿ ಕೊಡಬೇಕು ಎಂದು ಕೋರಲಾಗಿದೆ ಎಂದರು.
ಕನ್ನಡದ ವ್ಯಾಕರಣ ಮಾಲೆ ಪ್ರಕಾರ 1,400 ಜಾತಿ ಪಟ್ಟಿ ಮಾಡಿದ್ದಾರೆ. ಪ್ರವರ್ಗ ಪ್ರಕಾರ ಇದನ್ನು ಮಾಡಿ ಎಂದು ಕೋರಿದ್ದೇವೆ. ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡಿದ್ದಾರೆ. ಆದರೆ, 15 ದಿನದಲ್ಲೇ ಮಾಡುವ ಹಠಮಾರಿತನ ಅವರಲ್ಲಿ ಇದ್ದಂತಿದೆ. ತರಾತುರಿಯಲ್ಲಿ ಇದನ್ನು ಮಾಡಿ ವರದಿ ತಿರಸ್ಕಾರ ಆಗದಂತೆ ನೋಡಿಕೊಳ್ಳಬೇಕು. ಈ ಸಮೀಕ್ಷೆಯೇ ಭವಿಷ್ಯದ ರಾಜ್ಯ ಸರಕಾರಗಳ ಮುಂದಿನ ಕಾರ್ಯಕ್ರಮಗಳನ್ನು ಸಿದ್ಧಪಡಿಸುವ ಭೂಮಿಕೆ ಎಂದರಲ್ಲದೇ ತರಾತುರಿಯಲ್ಲಿ ಸಮೀಕ್ಷೆ ಮಾಡದಿರಲು ಕೋರಿದ್ದಾಗಿ ತಿಳಿಸಿದರು.